ಮಂಡ್ಯ: ಹೆದ್ದಾರಿಯಲ್ಲಿ ಸೃಷ್ಟಿಯಾದ ಕಾರಂಜಿಯಿಂದಾಗಿ ರಸ್ತೆಯೂ ನದಿಯಂತಾಗಿ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾದ ಪ್ರಕರಣವೊಂದು ವರದಿಯಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಲೋಕಪಾವನಿ ನದಿ ಸೇತುವೆ ಬಳಿ ಈ ಕಾರಂಜಿ ಉಂಟಾಗಿದೆ. ಕಾವೇರಿ ನದಿಯಿಂದ ಮಂಡ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ನಲ್ಲಿ ಒಡಕು ಕಾಣಿಸಿಕೊಂಡಿದ್ದರಿಂದ ಅದರೊಳಗಿಂದ ನೀರು ಕಾರಂಜಿಯಂತೆ ಚಿಮ್ಮಿ ಹರಿದಿದೆ.
ನೀರಿನ ಒತ್ತಡಕ್ಕೆ ಅದು ಕೊಳವೆಯಿಂದ ಮೇಲಕ್ಕೆ ಕಾರಂಜಿಯಂತೆಯೇ ಚಿಮ್ಮಿದ್ದು, ಸುಮಾರು 30 ನಿಮಿಷಗಳ ಕಾಲ ನೀರು ಪೋಲಾಗಿದೆ. ಉಕ್ಕಿ ಹರಿದ ನೀರೆಲ್ಲ ರಸ್ತೆಯಲ್ಲಿ ನದಿಯಂತೆ ಹರಿದುಹೋಗಿದೆ. ಪರಿಣಾಮವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಕೆಲಕಾಲ ಅಡಚಣೆ ಎದುರಿಸುವಂತಾಗಿತ್ತು. ಜಲಮಂಡಳಿ ಸಿಬ್ಬಂದಿ ಪೈಪ್ ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದ್ದಾರೆ.