-ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕಿನ 6 ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಜೂನ್ 15 ಕಳೆದರೂ ಮುಂಗಾರು ಪ್ರವೇಶಿಸದ ಕಾರಣ ಬಾವಿ, ತೋಡು, ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಕಳೆದ ವರ್ಷ ಈ ಹೊತ್ತಿಗೆ ಸಮೃದ್ಧವಾಗಿ ಜಲಮೂಲಗಳಲ್ಲಿ ನೀರು ಹರಿಯುತ್ತಿತ್ತು.
ತಾಲೂಕಿನ ವರಂಗ, ಮುದ್ರಾಡಿ, ಶಿವಪುರ, ಚಾರ, ಬೆಳ್ವೆ ಹಾಗೂ ಕುಚ್ಚೂರು ಗ್ರಾಮದ ಅನೇಕ ಮನೆಗಳಿಗೆ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವೊಮ್ಮೆ ಎರಡು ಅಥವಾ ಮೂರು ದಿನಗಳಿಗೊಮ್ಮೆ ಜನರಿಗೆ ನೀರು ಸಿಗುತ್ತಿದೆ.
ಜಿಲ್ಲೆಯಲ್ಲಿ ಶೇ.70ರಷ್ಟು ಮಳೆ ಕಡಿಮೆಯಾಗಿದೆ. ಸರ್ಕಾರಿ ಬಾವಿ ಹಾಗೂ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ. ಬಾವಿಗಳಲ್ಲಿ ನೀರಿಲ್ಲ. ಅಂತರ್ಜಲ ಮಟ್ಟ ಕುಸಿದಿದೆ.
ಪಂಚಾಯಿತಿಗಳಿಗೆ ನೀರಿನ ಮೂಲ ಸಿಗದಿದ್ದಾಗ ಸ್ಥಳೀಯ ಕೆಲವು ದಾನಿಗಳನ್ನು ಸಂಪರ್ಕಿಸಿದಾಗ ಜನರಿಗೆ ಉಚಿತವಾಗಿ ನೀರು ನೀಡಿದ್ದಾರೆ. ಅವರ ಸೇವೆ ಜನ ಹಾಗೂ ಪಂಚಾಯತಿ ಅಧಿಕಾರಿಗಳು ಗುರುತಿಸಿದ್ದಾರೆ.
ತಾಲೂಕಿನ 9 ಗ್ರಾಮ ಪಂಚಾಯಿತಿಗಳಲ್ಲಿ ಹೆಬ್ರಿ, ನಾಡ್ಪಾಲು ಹಾಗೂ ಮಡಾಮಕ್ಕಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಸರ್ಕಾರದ ಬಾವಿ ಹಾಗೂ ಬೋರ್‌ವೆಲ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರಿನ ಸಂಪರ್ಕ ಕಲ್ಪಿಸುತ್ತಿದ್ದಾರೆ. ಆದ್ದರಿಂದ ಎಲ್ಲೂ ಸಮಸ್ಯೆ ಕಾಣುತ್ತಿಲ್ಲ.
ಟ್ಯಾಂಕರ್ ನೀರಿಗೆಬೇಡಿಕೆ ಹೆಚ್ಚಾಗುತ್ತಿದೆ. ಪಂಚಾಯಿತಿಯಲ್ಲಿ ಎರಡು ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬಹುತೇಕರಿಗೆ ನೀರು ಸಾಲುತ್ತಿಲ್ಲ. ಒಂದು ವೇಳೆ ಸಮರ್ಪಕ ಮಳೆಯಾಗದಿದ್ದಲ್ಲಿ ನೀರಿಗೆ ಗಂಡಾಂತರ ಎದುರಾಗಲಿದೆ.
ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸದ ಪರಿಣಾಮವಾಗಿ ಪಂಚಾಯಿತಿಗಳ ಅನುದಾನದ ಮೇಲೆ ಇದು ಪರಿಣಾಮ ಬೀರುತ್ತದೆ. ಆ ನಿಟ್ಟಿನಲ್ಲಿ ಗ್ರಾಪಂಯಲ್ಲಿ ವಸೂಲಾದ ಕರವನ್ನು ನೀರು ಸರಬರಾಜು ಮಾಡಲು ಬಳಸಿ ಜನರಿಗೆ ಸಮಸ್ಯೆ ಆಗದಂತೆ ನೀರಿನ ಸಮಸ್ಯೆ ಬಗೆಹರಿಸಲು ಸಿಇಒ ಸೂಚಿಸಿದ್ದಾರೆ. ಒಂದು ವೇಳೆ ಸರ್ಕಾರದಿಂದ ಅನುದಾನ ಬರದಿದ್ದಲ್ಲಿ ಕುಡಿಯುವ ನೀರಿಗಾಗಿ ಪಂಚಾಯಿತಿ ಮಾಡಿದ ಖರ್ಚು ಬೇರೆ ಅನುದಾನಗಳಲ್ಲಿ ಜಿಪಂ ವತಿಯಿಂದ ನೀಡಲಾಗುತ್ತದೆ ಆದ್ದರಿಂದ ಯಾವುದೇ ಪಂಚಾಯಿತಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಸಿಇಓ ಸ್ಪಷ್ಟಪಡಿಸಿದ್ದಾರೆ.
ಮುಂಗಾರು ಪ್ರವೇಶಿಸದ ಕಾರಣ ಕೃಷಿ ಭೂಮಿಗಳು ಕಾದಿದೆ. ಅಡಕೆ ಹಾಗೂ ತೆಂಗಿನ ಗಿಡಗಳು ಒಣಗುತ್ತಿವೆ. ಸಣ್ಣ ಅಡಕೆಗಳು ಉದುರುತ್ತಿವೆ. ಮಳೆಯಾಗದಿದ್ದಲ್ಲಿ ಕೃಷಿಕರಿಗೆ ಕಂಟಕ ಎದುರಾಗಲಿದೆ.
ಬಾವಿಯಲ್ಲಿ ನೀರು ಬತ್ತಿದೆ. ಮಳೆ ಆಗುತ್ತಿಲ್ಲ. ಗದ್ದೆಯನ್ನು ಹದ ಮಾಡಲು ಸಾಧ್ಯವಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಜೂನ್ 15 ಕಳೆದರೂ ಮಳೆಯಾಗದ ಕಾರಣ ಸಮಸ್ಯೆ ಎದುರಾಗಿದೆ. ನಮ್ಮಂಥ ಸಣ್ಣ ರೈತರು ಮಳೆಯನ್ನು ಅವಲಂಬಿಸಿ ಕೃಷಿ ಮಾಡುವುದು. ಬೇರೆ ಯಾವುದೇ ನೀರಿನ ಮೂಲವಿಲ್ಲ. ಕೃಷಿಯಲ್ಲಿ ಯಾವುದೇ ಲಾಭವಿಲ್ಲ, ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚು.-ಬಾಬು ನಾಯ್ಕ, ಕೃಷಿಕರು
ಸರ್ಕಾರಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪಂಚಾಯಿತಿಗಳು ಜನರಿಗೆ ಸಮಸ್ಯೆ ಆಗದಂತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆದೇಶಿಸಲಾಗಿದೆ. ಕುಡಿಯುವ ನೀರಿಗಾಗಿ ಬಳಸಿದ ಅನುದಾನ ಸರ್ಕಾರದಿಂದ ದೊರೆಯದಿದ್ದಲ್ಲಿ ಬೇರೆ ಅನುದಾನ ಪಂಚಾಯಿತಿಗಳಿಗೆ ನೀಡಿ ಹೊಂದಾಣಿಕೆ ಮಾಡಲಾಗುತ್ತದೆ. ಜನರಿಗೆ ಆದ್ಯತೆ ಮೇಲೆ ನೀರು ನೀಡಲೇಬೇಕು.-ಪ್ರಸನ್ನ, ಸಿಇಒ, ಉಡುಪಿ, ಜಿಪಂ