ಜಿಲ್ಲೆ

ಗೇರುಸೊಪ್ಪ ಅಣೆಕಟ್ಟೆಯಿಂದ ಮತ್ತೆ ನೀರು ಹೊರಕ್ಕೆ

Uttara Kannada - Subash Hegde

ಕಾರವಾರ:ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಅಣೆಕಟ್ಟೆಯಿಂದ ಮಂಗಳವಾರ ಮತ್ತೆ ನೀರು ಹೊರಬಿಡಲಾಗಿದೆ. ಪರಿಣಾಮ ಹೊನ್ನಾವರ ಗೇರುಸೊಪ್ಪ ಅಣೆಕಟ್ಟೆಯಿಂದಲೂ ನೀರನ್ನು ಹೊರಗೆ ಹರಿಸಲಾಗುತ್ತಿದೆ.

ಮಂಗಳವಾರ ಬೆಳಗ್ಗೆ ಲಿಂಗನಮಕ್ಕಿ ಅಣೆಕಟ್ಟೆಯಿಂದ 4 ಗೇಟ್‌ಗಳನ್ನು ತೆರೆದು 32,980 ಕ್ಯೂಸೆಕ್ ನೀರು ಹೊರಬಿಡಲಾಯಿತು. ಅಲ್ಲದೇ ವಿದ್ಯುತ್ ಉತ್ಪಾದನೆ ಮಾಡಿ 7,650 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಒಟ್ಟು, 40,630 ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಕೆಲವೇ ಸಮಯದಲ್ಲಿ ಗೇರುಸೊಪ್ಪ ಅಣೆಕಟ್ಟೆಯಿಂದ ಮೊದಲು 15 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಯಿತು. ನಂತರ ನೀರು ಹೊರ ಬಿಡುವ ಪ್ರಮಾಣವನ್ನು 50 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.

ಶರಾವತಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯೂ ಇರುವುದರಿಂದ ಗದ್ದೆ, ತೋಟಗಳು, ಕೆಲವು ತಗ್ಗು ಪ್ರದೇಶದ ಮನೆಗಳಿಗೂ ನೀರು ತುಂಬುವ ಸಾಧ್ಯತೆ ಇದೆ. ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೆಪಿಸಿ ಮುನ್ನೆಚ್ಚರಿಕೆ ನೀಡಿದೆ.