ಸಂಡೂರು ಪೊಲೀಸ್ ಠಾಣೆ ಆವರಣದಲ್ಲಿ ಸಿಪಿಐ ಮಹೇಶ್ ಗೌಡ ಠಾಣಾ ವ್ಯಾಪ್ತಿಯ ರೌಡಿಗಳು ಮತ್ತು ಕಳ್ಳತನ ಆರೋಪಿಗಳಿಗೆ ಎಚ್ಚರಿಕೆ ನೀಡಿದರು. ಪಿಎಸ್‌ಐ ವೀರೇಶ ಮಾಳಶೆಟ್ಟಿ ಇತರರಿದ್ದರು.  
ಜಿಲ್ಲೆ

ರೌಡಿ ಶೀಟರ್‌ಗಳ ಮೇಲೆ ನಿಗಾವಹಿಸಿ

ರುದ್ರಪ್ಪ ವಾಲಿ

ಸಂಡೂರು:ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಮಟ್ಕಾ, ಇಸ್ಪೀಟ್ ದಂಧೆಗಳಿಗೆ ಸಂಪೂರ್ಣ ಕಡಿವಾಣ ಹಾಕುವಂತೆ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಗೆ ವೃತ್ತ ನಿರೀಕ್ಷಕ ಮಹೇಶ್‌ಗೌಡ ಖಡಕ್ ಸೂಚನೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರೌಡಿ ಶೀಟರ್, ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳಿಗೆ ಪರೇಡ್ ನಡೆಸಿ ಮಾತನಾಡಿದರು. ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಟ್ ಪೊಲೀಸರು ಸಂಚರಿಸಿ ಆರೋಪಿಗಳ ಮೇಲೆ ನಿಗಾ ಇಡಬೇಕು.

ರೌಡಿ ಶೀಟರ್‌ಗಳ ಕುರಿತು ನಿರಂತರ ಮಾಹಿತಿ ಒದಗಿಸಿ, ಪರೇಡ್‌ಗಳನ್ನು ನಡೆಸುವಾಗ ಎಷ್ಟೇ ಪ್ರಭಾವಿ ವ್ಯಕ್ತಿ ಇದ್ದರೂ ಆರೋಪಿಗಳನ್ನು ಕರೆತರುವಲ್ಲಿ ತಾರತಮ್ಯ ಮಾಡಬೇಡಿ. ಬೀಟ್ ಪೊಲೀಸರು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಠಾಣಾಧಿಕಾರಿಗಳು ನಿರ್ದೇಶಿಸಬೇಕು.

ಕಾನೂನು ಕ್ರಮ

ಗ್ರಾಮಗಳಲ್ಲಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ಸಂಪ್ರದಾಯ ಬಿಡಬೇಕು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರುಗಳು ಸಲ್ಲಿಕೆಯಾಗುತ್ತಿವೆ. ಮೈನಿಂಗ್ ಧೂಳಿನ ಪರಿಹಾರವಿದ್ದಲ್ಲಿ ತಹಸೀಲ್ದಾರ್ ಮೂಲಕ ಬಗೆಹರಿಸಿಕೊಳ್ಳಬೇಕು. ದಬ್ಬಾಳಿಕೆ, ವಸೂಲಿ, ಗಲಾಟೆಗಳು ನಡೆದರೆ ಅವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು.

ಈಗಾಗಲೇ ರೌಡಿ ಶೀಟರ್ ಮತ್ತು ಕಳ್ಳತನ ಕೇಸ್‌ನಲ್ಲಿನ ಆರೋಪಿಗಳು ಉತ್ತಮ ನಡತೆ ಹೊಂದಿದ್ದರೆ ಅಂತಹವರನ್ನು ಮೇಲಾಧಿಕಾರಿಗಳ ಆದೇಶದಂತೆ ನಿಯಮಾನುಸಾರ ಪಟ್ಟಿಯಿಂದ ಕೈ ಬಿಡಲಾಗುವುದು ಎಂದರು.