ಜಿಲ್ಲೆ

ಭಾರತದ ಅಭ್ಯುದಯಕ್ಕಾಗಿ ಮೋದಿ ಗೆಲ್ಲಿಸಿ:ಸಂಪತ್ ಬಿ. ಸುವರ್ಣ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಭಾರತೀಯ ಸಂಪ್ರದಾಯಗಳ ಆಚರಣೆಯಿಂದ ಕೇಂದ್ರ ಸರ್ಕಾರ ವಿಶ್ವಕ್ಕೆ ಬೆಳಕು ನೀಡಿದೆ. ಜತೆಗೆ ಸನಾತನ ಧರ್ಮ ಆಚರಿಸುವ ನಾಯಕತ್ವವನ್ನೂ ಕಳೆದ 10 ವರ್ಷಗಳಲ್ಲಿ ಬಿಜೆಪಿ ದೇಶಕ್ಕೆ ನೀಡಿದೆ. ಶತಮಾನಗಳಿಂದಲೂ ಹಿಂದುಗಳ ಕನಸಾಗಿದ್ದ ರಾಮ ಮಂದಿ ನಿರ್ಮಾಣ, ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಯೋಜನೆ, ತೀರ್ಥಯಾತ್ರಿಗಳ ಅನುಕೂಲಕ್ಕೆ ರಾಮಾಯಣ ಎಕ್ಸಪ್ರೆಸ್ ರೈಲು ಯೋಜನೆಯಂತಹ ನೂರಾರು ಉಪಯುಕ್ತ ಯೋಜನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯನ್ನು ಎಲ್ಲರೂ ಮತ್ತೊಮ್ಮೆ ಗೆಲ್ಲಿಸಬೇಕೆಂದು ಸಂಸ್ಕಾರ ಭಾರತಿ ಬೆಳ್ತಂಗಡಿ ಘಟಕ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಹೇಳಿದರು.

ನಮ್ಮ ದೇಶದ ನಾಗರಿಕತೆಯ ಸಂಕೇತಗಳಾದ ದೇವಾಲಯಗಳು, ಶತಮಾನಗಳ ಹಿನ್ನಲೆ ಇರುವ ಧಾರ್ಮಿಕ ಕಟ್ಟಡಗಳು, ಸಂಪ್ರದಾಯಗಳು, ಪಾರಂಪರಿಕ ತಾಣಗಳು, ಯಾತ್ರಾ ಸ್ಥಳಗಳು ಅಭಿವೃದ್ಧಿ ಹೊಂದಿವೆ. ಭಾರತೀಯ ಸಂಸ್ಕೃತಿ ಮೇಲೆತ್ತುವ ಸರ್ಕಾರ ನೀಡಿ ವಿಕಾಸವಾದ ಮೌಲ್ಯಗಳ ಪುನರುತ್ಥಾನದೊಂದಿಗೆ ರಾಷ್ಟ್ರದ ಭವಿಷ್ಯ ರೂಪಿಸಿದ ಹಿರಿಮೆ ನರೇಂದ್ರ ಮೋದಿಗೆ ಸಲ್ಲಲಿದೆ. ಪ್ರಾಚೀನ ಭಾರತ ಮತ್ತು ಭವಿಷ್ಯದ ನವಭಾರತದೊಂದಿಗೆ ಆಧುನಿಕ ಭಾರತದ ಸಂಪರ್ಕ ಮರುಸ್ಥಾಪಿಸುವುದರ ಜತೆಗೆ ರಾಜತಾಂತ್ರಿಕ, ಆರ್ಥಿಕ, ಮಿಲಿಟರಿ ಮತ್ತು ಸಾಂಸ್ಕೃತಿಕ ಮಟ್ಟದಲ್ಲಿ ಭಾರತವನ್ನು ಜಾಗತಿಕ ಶಕ್ತಿಯಾಗಿ ಮೋದಿ ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರೃ ನಂತರ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಬರೆಯುವ ಮೂಲಕ ಹುತಾತ್ಮರ ತ್ಯಾಗವನ್ನು ಭಾವನಾತ್ಮಕವಾಗಿ ಬೆಸೆದಿದ್ದಾರೆ. ಮೋದಿ ಆಡಳಿತ ಜಗತ್ತನ್ನೇ ಆಕರ್ಷಿಸಿದೆ. ದೇಶದ ಜನಸಾಮಾನ್ಯರಿಗೆ, ತೆರೆಮರೆಯ ಸಾಧಕರಿಗೆ ಪದ್ಮ ಪ್ರಶಸ್ತಿ ಗೌರವ ನೀಡಿ ಹೊಸ ಇತಿಹಾಸ ಬರೆದಿದೆ. ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ರಕ್ಷಣೆ, ವಿದೇಶಾಂಗ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ, ಯೋಜನೆಗಳನ್ನು ತರುವ ಮೂಲಕ ಗರಿಷ್ಠ ಮಟ್ಟದಲ್ಲಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಶ್ರೇಷ್ಠ ನಾಯಕತ್ವಕ್ಕಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗು ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮತ ನೀಡಿ ಅಭೂತಪೂರ್ವ ಜಯ ದಾಖಲಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹರಸಬೇಕೆಂದು ಸಂಪತ್ ಸುವರ್ಣ ಬಿ.ವಿನಂತಿಸಿದ್ದಾರೆ.