More

    ರಾಜ್ಯದಲ್ಲಿ ಅಭದ್ರತೆಯ ಜೀವನ ಸೃಷ್ಟಿಮಾನವ ಸರಪಳಿ ಪ್ರತಿಭಟನೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ

    ಮಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಹಿಂದೂ ವಿರೋಧಿ ನೀತಿಯಿಂದ ಮಹಿಳೆಯರು, ಯುವಕರು, ದಲಿತರು ಸೇರಿದಂತೆ ಎಲ್ಲ ವರ್ಗದವರು ಆತಂಕದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ ಎಂದು ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.


    ಬುಧವಾರ ನಗರದಲ್ಲಿ ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಮಾನವ ಸರಪಳಿ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.


    ಹಿಂದೂಗಳು, ಹಿಂದೂ ಜೀವನಪದ್ಧತಿಗೆ ಗೌರವ ಸಿಗುತ್ತಿಲ್ಲ. ಕಾಂಗ್ರೆಸ್ ದೇಶವಿರೋಧಿ, ಸಮಾಜವಿರೋಧಿ ಶಕ್ತಿಗಳ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ದ.ಕ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್- ಎಸ್‌ಡಿಪಿಐ ನಡುವೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ದೇಶವಿರೋಧಿ, ಸಮಾಜವಿರೋಧಿ ಶಕ್ತಿಗಳ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದರು.


    ಕಾಂಗ್ರೆಸ್ ಸರ್ಕಾರ ಜನರ ಜೇಬಿನಿಂದ ಕೈ ಹಾಕಿ ತೆಗೆದು ಇನ್ನೊಂದು ಕೈಯಲ್ಲಿ ಕೊಡುತ್ತಿದೆ. ಪಿಕ್‌ಪಾಕೆಟ್ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಕೊಡುತ್ತಿಲ್ಲ. ಶಾಸಕರಿಗೆ ಮೂಲ ಅನುದಾನ ನೀಡಿಲ್ಲ. ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಒಂದೇ ಒಂದು ಹೊಸ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಿಲ್ಲ. ಸಿಎಂ ಸಿದ್ಧರಾಮಯ್ಯ ಕೂಡ ಯಾವುದೇ ಹೊಸ ಯೋಜನೆಗೆ ಶಿಲಾನ್ಯಾಸ ಮಾಡಿಲ್ಲ. ಕೇವಲ ಸುಳ್ಳನ್ನೇ ಬಂಡವಾಳವಾಗಿಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಹೇಳಿದಾಗ ಖಂಡಿಸಿಲ್ಲ. ದೇಶ ತುಂಡಾಗಿಸುವ ಮಾತು ಹೇಳುವಾಗಲೂ ಖಂಡಿಸಿಲ್ಲ. ಹುಬ್ಬಳ್ಳಿಯಲ್ಲಿ ಯುವತಿಯ ಕೊಲೆ ನಡೆದಾಗ ಆಕಸ್ಮಿಕ ಎಂದಿದ್ದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟವಾದಾಗ ಬ್ರದರ್ಸ್‌ ಎಂದಿದ್ದರು. ಕಾಂಗ್ರೆಸ್ ಪಿಎಫ್‌ಐ ಪರವಾಗಿದೆಯೋ ಅಥವಾ ದೇಶವನ್ನು ಪ್ರೀತಿಸುವವರ ಪರವಾಗಿದೆಯೋ ಎಂಬುದನ್ನು ತಿಳಿಸಬೇಕು. ದ.ಕ ಜಿಲ್ಲೆ ಹಿಂದೆಯೂ ಹಿಂದುತ್ವದ ಭದ್ರ ಕೋಟೆಯಾಗಿತ್ತು. ಮುಂದೆಯೂ ಭದ್ರಕೋಟೆಯಾಗಿರುತ್ತದೆ ಎಂದು ಕ್ಯಾ. ಚೌಟ ಹೇಳಿದರು.


    ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಕಾಂಗ್ರೆಸ್ ಮಾಡಿದ ಕಳ್ಳತನವನ್ನು ಜನರಿಗೆ ತೋರಿಸುವ ಪ್ರಯತ್ನವಾಗಿ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ ಎಂದರು.


    ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಜಗದೀಶ್ ಶೇಣವ, ವಿಜಯ್ ಕುಮಾರ್, ರಮೇಶ್ ಕೊಂಡೆಟ್ಟು ಮೊದಲಾದವರು ಪಾಲ್ಗೊಂಡಿದ್ದರು. ನಗರದ ಕ್ಲಾಕ್‌ಟವರ್ ವೃತ್ತದಿಂದ ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆಯವರೆಗೆ ಮಾನವ ಸರಪಳಿ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts