ಜಿಲ್ಲೆ

ವಿಶ್ವಕರ್ಮ ಅರ್ಜಿ ವಿಲೇವಾರಿಗೆ ಕ್ರಮ

ಎನ್.ವೆಂಕಟೇಶ್

ವಿಜಯವಾಣಿ ವರದಿಯಿಂದ ಎಚ್ಚೆತ್ತ ಪುರಸಭೆ 194 ಮನವಿ ಇತ್ಯರ್ಥ, ಆನ್‌ಲೈನ್‌ನಲ್ಲಿ 98 ಮಂದಿಗೆ ಸೌಲಭ್ಯ

ಬಾಗೇಪಲ್ಲಿ: ಸ್ಥಳೀಯ ಕುಲಕಸುಬುದಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ್ದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅರ್ಜಿ ಪರಿಶೀಲನೆ ಕಾರ್ಯಕ್ಕೆ ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಯೋಜನೆ ಅನುಷ್ಠಾನ ಸಂಪೂರ್ಣ ಹಳ್ಳ ಹಿಡಿದಿದ್ದು, ಯೋಜನೆಯಡಿ ಸೌಲಭ್ಯಕ್ಕಾಗಿ ಸಾವಿರಾರು ಮಂದಿ ಸಲ್ಲಿಸಿದ್ದ ಅರ್ಜಿಗಳು ಆನ್‌ಲೈನ್‌ನಲ್ಲೇ ಕುಳಿತಿವೆ ಎಂದು ಡಿ.9ರ ವಿಜಯವಾಣಿಯಲ್ಲಿ ಪ್ರಕಟಗೊಂಡಿರುವ ವರದಿಯಿಂದ ಎಚ್ಚೆತ್ತುಕೊಂಡಿರುವ ಪುರಸಭೆ ಅಧಿಕಾರಿಗಳು ಈಗ ಕ್ರಮ ಕೈಗೊಂಡಿದ್ದಾರೆ.

ಪುರಸಭೆ ಕಾರ್ಯಾಲಯಕ್ಕೆ ಭೌತಿಕವಾಗಿ ಸಲ್ಲಿಸಿರುವ 401 ಅರ್ಜಿಗಳ ಪೈಕಿ 107 ಅರ್ಜಿಗಳನ್ನು ಈ ಹಿಂದೆ ಪರಿಶೀಲಿಸಲಾಗಿದ್ದು, ವಿಜಯವಾಣಿ ವರದಿ ಪ್ರಕಟಗೊಂಡ ನಂತರ ಸೂಕ್ತ ದಾಖಲೆ ಸಲ್ಲಿಸಿರುವ 194 ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಗೊಳಿಸಲಾಗಿದೆ. ಸೂಕ್ತ ದಾಖಲೆ ಇಲ್ಲದ 98 ಅರ್ಜಿದಾರರ ವಿಳಾಸ ಪತ್ತೆಹಚ್ಚಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅನ್‌ಲೈನ್‌ನಲ್ಲಿ ಶಿಾರಸು ಮಾಡಲಾಗಿದೆ. ದಾಖಲೆ ಲಗತ್ತಿಸದ ಹಾಗೂ ವಿಳಾಸ ಪತ್ತೆಯಾಗದ 2 ಅರ್ಜಿಗಳನ್ನು ದಾಖಲೆ ಲಭ್ಯವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿಗಳು ಚಿಕ್ಕಬಳ್ಳಾಪುರದ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ.

ಜವಾಬ್ದಾರಿ ಮರೆತ ಅನುಷ್ಠಾನ ಸಮಿತಿ

ಭಾರತ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿರುವ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯಲ್ಲಿ ಒಟ್ಟು 10 ಸದಸ್ಯರಿದ್ದಾರೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದರೆ, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಹಾಗೂ ಎಂಎಸ್‌ಎಂಇ ನಿರ್ದೇಶಕರು, ಉಳಿದಂತೆ ಆರ್ಥಿಕ ಇಲಾಖೆ ಕಾರ್ಯದರ್ಶಿ, ಪಂಚಾಯತ್ ರಾಜ್ ಇಲಾಖೆ ಆಯುಕ್ತರು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಐಟಿ ಮತ್ತು ಬಿಟಿ ಇಲಾಖೆ ನಿರ್ದೇಶಕರು, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಭಾರತ ಸರ್ಕಾರದ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯದ ನಿರ್ದೇಶಕರು ಇರುತ್ತಾರೆ. ಯೋಜನೆಯ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಜವಾಬ್ದಾರಿ ವಹಿಸಿರುವ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಯೋಜನೆಯ ಪ್ರಗತಿ ಕುರಿತು ನಿಗಾವಹಿಸಬೇಕಾಗಿದೆ. ಆದರೆ, ಸಮಿತಿ ವೈಲ್ಯ ಎದ್ದುಕಾಣುತ್ತಿದೆ.

"ಪುರಸಭೆಯಲ್ಲಿ ವಿಶ್ವಕರ್ಮ ಯೋಜನೆ ಸೌಲಭ್ಯಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಆನ್‌ಲೈನ್‌ನಲ್ಲಿ ಶಿಾರಸು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಯ ಸೌಲಭ್ಯಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಸೂಕ್ತ ದಾಖಲೆ ಸಲ್ಲಿಸಿ ನಂತರ ಪುರಸಭೆಗೂ ಭೌತಿಕವಾಗಿ ದಾಖಲೆ ಸಲ್ಲಿಸಿದರೆ ತ್ವರಿತವಾಗಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ." - ಎಂ.ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ ಬಾಗೇಪಲ್ಲಿ