ಜಿಲ್ಲೆ

ವಾಹನಗಳ ನಂಬರ್‌ಪ್ಲೇಟ್‌ಗಳೇ ಮಾಯ! :ಕಾನೂನು ಉಲ್ಲಂಘನೆ ಬಗ್ಗೆ ಮೌನ ಪಾಲಿಸುತ್ತಿರುವ ಅಧಿಕಾರಿಗಳು

ಸೌಮ್ಯ ಆರ್

ಪುರುಷೋತ್ತಮ ಪೆರ್ಲ ಕಾಸರಗೋಡು

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ನಡೆಸುತ್ತಿರುವ ಬಹುತೇಕ ಸರಕು ಸಾಗಾಟದ ವಾಹನಗಳ ನಂಬರ್ ಪ್ಲೇಟ್ ಮರೆಯಾಗಿರುವ ಸ್ಥಿತಿಯಲ್ಲಿದ್ದು, ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಮೌನ ಧೋರಣೆ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ.

ಬೃಹತ್ ಕಂಟೈನರ್‌ಗಳು, ಸರಕು ಸಾಗಾಟದ ಘನ ವಾಹನಗಳ ಹಿಂಭಾಗಕ್ಕೆ ಅಳವಡಿಸಿರುವ ಕೆಲವೊಂದು ಹೆಚ್ಚುವರಿ ಫಿಟ್ಟಿಂಗ್‌ಗಳಿಂದ ನಂಬರ್‌ಪ್ಲೇಟ್‌ಗಳನ್ನು ಭೂತಗನ್ನಡಿಯಿರಿಸಿ ಹುಡುಕಾಡುವ ಪರಿಸ್ಥಿತಿಯಿದೆ. ಸಾಮಾನ್ಯವಾಗಿ ಹತ್ತರಲ್ಲಿ ಎಂಟರಷ್ಟು ಲಾರಿ ಸೇರಿದಂತೆ ಭಾರಿ ವಾಹನಗಳ ಹಿಂಭಾಗದ ನಂಬರ್ ಪ್ಲೇಟ್‌ಗಳನ್ನು ಮರೆಮಾಚಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಕೆಲವೊಂದು ವಾಹನಗಳು ಉದ್ದೇಶಪೂರ್ವಕವಾಗಿ ಹಿಂಭಾಗದ ನಂಬರ್‌ಪ್ಲೇಟ್‌ಗಳನ್ನು ಮರೆಮಾಚುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ. ಇವೆಲ್ಲವನ್ನೂ ತಪಾಸಣೆ ನಡೆಸಬೇಕಾಗಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು, ಪೊಲೀಸರು ಮೌನ ಪಾಲಿಸಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ.

ಪ್ರತಿ ದಿನ ಕಾಸರಗೋಡಿನಿಂದ ಕಣ್ಣೂರು ಭಾಗಕ್ಕೆ ನಂಬರ್‌ಪ್ಲೇಟ್ ಮರೆಮಾಚಿ ಹಲವು ಲಾರಿಗಳು ಸಂಚಾರ ನಡೆಸುತ್ತಿದ್ದರೂ, ಅಧಿಕಾರಿಗಳು ಇವುಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಇಂತಹ ಕೆಲವು ವಾಹನಗಳ ಮೂಲಕ ಅನಧಿಕೃತ ಸಾಗಾಟ, ಕಾನೂನು ಬಾಹಿರ ಚಟುವಟಿಕೆಗಳೂ ನಡೆದು ಬರುವ ಸಾಧ್ಯತೆ ಹೆಚ್ಚಾಗಿದೆ.

ಕೇರಳಾದ್ಯಂತ ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆ ವತಿಯಿಂದ ಕಾರ್ಯಾಚರಿಸುತ್ತಿರುವ ನೂರಾರು ಸಿಸಿ ಕ್ಯಾಮರಾಗಳಿದ್ದರೂ, ಇಂತಹ ಕಾನೂನು ಉಲ್ಲಂಘನೆಯ ಕೃತ್ಯಗಳು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸ.

ಸಾರಿಗೆ ವಾಹನ ನಿಬಂಧನೆ ಉಲ್ಲಂಘನೆ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆ ಸ್ಪೆಷಲ್ ಡ್ರೈವ್ ಆರಂಭಿಸಿದೆ. ಸಂಚಾರ ಕಾನೂನು ಉಲ್ಲಂಘನೆ, ಅನಧಿಕೃತ ನಂಬರ್‌ಪ್ಲೇಟ್ ಅಳವಡಿಕೆ, ಮರೆಮಾಚಿದ ಸ್ಥಿತಿಯಲ್ಲಿರುವ ನಂಬರ್‌ಪ್ಲೇಟ್, ಕರ್ಕಶ ಹಾರ್ನ್, ಪ್ರಖರ ಬೆಳಕು ಸೇರಿದಂತೆ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಲು ಇಲಾಖೆ ಮುಂದಾಗಿದೆ. ರಾಜೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ