ಕಂಪ್ಲಿ: ಬಲವಂತವಾಗಿ ದೇವದಾಸಿ ಪದ್ಧತಿಗೆ ಒಳಗಾಗಿರುವ ಮಹಿಳೆಯರು ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಎಷ್ಟೇ ಮನವಿ, ಹೋರಾಟ ನಡೆಸಿದರೂ ಸ್ಪಂದನೆ ಇಲ್ಲವಾಗಿದೆ.
ವಿಮುಕ್ತ ದೇವದಾಸಿಯರ ಪುನರ್ವಸತಿ ಯೋಜನಾ ನಿಗಮದ 2007-08ರ ಸಮೀಕ್ಷೆಯಂತೆ ತಾಲೂಕಿನಲ್ಲಿ 523 ವಿಮುಕ್ತ ದೇವದಾಸಿಯರಿದ್ದಾರೆ. ತಾಲೂಕಿನ 225ಕ್ಕೂ ಹೆಚ್ಚು ಜನ ವಿಮುಕ್ತ ದೇವದಾಸಿಯರು ಸಮೀಕ್ಷೆ ಪಟ್ಟಿಯಿಂದ ಹೊರಗಿದ್ದು, ಮರು ಸರ್ವೇಗೆ ಒತ್ತಾಯಿಸಿದರೂ ಆಡಳಿತ ವರ್ಗ ಕೇಳುತ್ತಿಲ್ಲ ತಾಲೂಕಿನ 30ಕ್ಕೂ ಹೆಚ್ಚು ವಿಮುಕ್ತ ದೇವದಾಸಿಯರಿಗೆ ಮಾಶಾಸನ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಆರ್ಥಿಕ ಸ್ವಾವಲಂಬನೆಗಾಗಿ ನೀಡುವ ಆರ್ಥಿಕ ಸಹಾಯ ಬಹುತೇಕರಿಗೆ ಸಿಕ್ಕಿಲ್ಲ. ಈ ಮೊತ್ತವನ್ನು 5 ಲಕ್ಷ ರೂ.ವರೆಗೆ ವಿಸ್ತರಿಸಬೇಕೆಂಬ ಆಗ್ರಹವೂ ಈಡೇರುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ತಾಲೂಕಿನಲ್ಲಿ 15 ಜನ ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ.
ಜಿಲ್ಲಾ ಖನಿಜ ನಿಧಿಯಡಿ ವಿಮುಕ್ತ ದೇವದಾಸಿಯರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆಗಾಗಿ ಪ್ರತ್ಯೇಕ ವಿಶೇಷ ಆಧುನಿಕ ಆಸ್ಪತ್ರೆ, ಪೌಷ್ಟಿಕ ಆಹಾರ ಕಿಟ್ ವಿತರಿಸಬೇಕು. ಈಗಾಗಲೇ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಸಂಡೂರಲ್ಲಿ ಸೂರಿಗಾಗಿ ನಿವೇಶನ ನೀಡಿದ್ದಾರೆ. ಆದರೆ, ಕಂಪ್ಲಿ ತಾಲೂಕಿನಲ್ಲಿ ಈವರೆಗೆ ಮಂಜೂರು ಮಾಡಿಲ್ಲ. ಮಕ್ಕಳಿಗಾಗಿ ವಿಶೇಷ ಶಾಲೆ, ಹಾಸ್ಟೆಲ್ ಆರಂಭಿಸಬೇಕು.
ಶಾಲೆ ಕಾಲೇಜುಗಳಲ್ಲಿ ದಾಖಲಾತಿ ಸಂದರ್ಭ, ನೇಮಕಾತಿಯಲ್ಲಿ ಮಕ್ಕಳ ತಂದೆಯ ಹೆಸರಿಗಾಗಿ ಒತ್ತಾಯಿಸಬಾರದು. ಅವರ ವಿವಾಹಕ್ಕೆ ಪ್ರೋತ್ಸಾಹ ಧನಕ್ಕೆ ವಿಧಿಸಿರುವ ವಿಪರೀತ ಷರತ್ತುಗಳನ್ನು ತೆಗೆದು ಹಾಕಬೇಕು. ಮಕ್ಕಳು ಯಾವುದೇ ಸಮುದಾಯದವರನ್ನು ಮದುವೆಯಾದರೂ ಪ್ರೋತ್ಸಾಹ ಧನ ನೀಡಬೇಕೆಂಬ ಬೇಡಿಕೆಯೂ ಈಡೇರಿಲ್ಲ. ಸೌಲಭ್ಯ ಪಡೆಯಲು ಕಚೇರಿಗೆ ಅಲೆದಾಟ ಹಾಗೂ ಪ್ರತಿಭಟನೆ, ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ವಿಮುಕ್ತ ದೇವದಾಸಿಯರ ಆರೋಪವಾಗಿದೆ.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 15 ಸಾವಿರ ವಿಮುಕ್ತ ದೇವದಾಸಿಯರಿದ್ದಾರೆ. ಗಂಗಾ ಕಲ್ಯಾಣ ಯೋಜನಡಿ ತಾಲೂಕಿನಲ್ಲಿ 15ಜನ ವಿಮುಕ್ತ ದೇವದಾಸಿಯರು ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ. ನಿವೇಶನ, ಉಳುಮೆಗೆ ಭೂಮಿ ವಿತರಿಸುವಲ್ಲಿ ತಾಲೂಕು ಆಡಳಿತ ಮುಂದಾಗಬೇಕು.| ಕೆ.ನಾಗರತ್ನಮ್ಮ, ರಾಜ್ಯ ಉಪಾಧ್ಯಕ್ಷೆ, ದೇವದಾಸಿಯರ ವಿಮೋಚನಾ ಸಂಘ, ಬಳ್ಳಾರಿ ವಿಮುಕ್ತ ದೇವದಾಸಿಯರ ಪುನರ್ವಸತಿ ಯೋಜನಾ ನಿಗಮದಿಂದ ಕೃಷಿ ಭೂಮಿ, ನಿವೇಶನ ಹಂಚಿಕೆ ಸೇರಿ ಸೌಲಭ್ಯಗಳ ಕೋರಿ ಯಾವುದೇ ಪ್ರಸ್ತಾವನೆ ಬಂದಿಲ್ಲ. ನಿಗಮದಿಂದ ಪ್ರಸ್ತಾವನೆ ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು.| ಗೌಸಿಯಾ ಬೇಗಂ, ತಹಸೀಲ್ದಾರ್, ಕಂಪ್ಲಿ ಸೌಲಭ್ಯ ಕಲ್ಪಿಸುವಾಗ 2007-08ರ ಸಮೀಕ್ಷೆಯ ಪಟ್ಟಿಯಲ್ಲಿ ನಮೂದಾಗಿರುವ ವಿಮುಕ್ತ ದೇವದಾಸಿಯರನ್ನು ಪರಿಗಣಿಸಲಾಗುತ್ತದೆ. ಮರು ಸಮೀಕ್ಷೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಸೌಲಭ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಿದರೆ ಕ್ರಮವಹಿಸಲಾಗುವುದು.| ಸುಧಾ, ಯೋಜನಾಧಿಕಾರಿ, ವಿಮುಕ್ತ ದೇವದಾಸಿಯರ ಪುನರ್ವಸತಿ ಯೋಜನಾ ನಿಗಮ, ಬಳ್ಳಾರಿ