ವಿಜಯವಾಣಿ ಸುದ್ದಿಜಾಲ ಕೋಟ
ಪಾಂಡೇಶ್ವರ ಗ್ರಾಪಂ ವ್ಯಾಪ್ತಿಯ ಬೆಣ್ಣೆಕುದ್ರು ಸೀತಾನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣಗೊಳ್ಳುತ್ತಿದೆ. ಈ ಕಾಮಗಾರಿಯಿಂದ ಲಾಭದ ಪ್ರಮಾಣದಷ್ಟೇ ಹಾನಿ ಪ್ರಮಾಣವೂ ಇದ್ದು, ಈ ಕುರಿತು ಪಂಚಾಯಿತಿ ಮೊದಲೇ ನಿರ್ಣಯ ಕೈಗೊಂಡಿದ್ದರೂ ಸಂಬಂಧಿತ ಇಲಾಖೆಯ ಬೆಂಬಲ ಸಿಕ್ಕಿಲ್ಲ. ಇದರಿಂದ ಪ್ರವಾಹದ ಭೀತಿಯಲ್ಲಿ ನಿತ್ಯವೂ ಜನ ದಿನ ಕಳೆಯುತ್ತಿದ್ದಾರೆ….
ಶನಿವಾರ ಪಾಂಡೇಶ್ವರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಪ್ರಥಮ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿಬಂದ ಆಕ್ರೋಶ. ಈ ಕುರಿತು ಪ್ರಸ್ತಾಪಿಸಿದ ಗ್ರಾಮಸ್ಥರು, ಪ್ರವಾಹ ಉಂಟಾದರೆ ಇಲಾಖೆ ಅಧಿಕಾರಿಗಳೇ ಜವಾಬ್ದಾರರಾಗಲಿದ್ದು, ಪರಿಹಾರ ನೀಡಲೇಬೇಕಾಗುತ್ತದೆ ಎಂದು ಸಿಆರ್‌ಜಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಿಆರ್‌ಝಡ್ ಇಲಾಖೆ ಅಧಿಕಾರಿ ರಾಮಲಿಂಗಾ ಪ್ರತಿಕ್ರಿಯಿಸಿ, ಎನ್‌ಐಟಿಕೆ ಮೂಲಕ ಅಧ್ಯಯನ ನಡೆಸಿಯೇ ಡ್ಯಾಂ ನಿರ್ಮಾಣ ನಡೆದಿದೆ. ಇದರಲ್ಲಿ ಹಸ್ತಕ್ಷೇಪ ಮಾಡಲಾಗದು. ಸಮಸ್ಯೆಗಳಿದ್ದರೆ ನಿರ್ಣಯಿಸಿ ಸಂಬಂಧಿಸಿದ ಇಲಾಖೆ ಮೂಲಕ ಸರ್ಕಾರದ ಗಮನ ಸೆಳೆಯಿರಿ ಎಂದರು.
ವಕೀಲ ಶ್ರೀಧರ ಪಿ.ಎಸ್ ಚಂದ್ರಮೋಹನ್ ಮಾತನಾಡಿ, ಡ್ಯಾಂ ಕಾಮಗಾರಿ ವಿರೋಧಿಸಿ ಪಂಚಾಯಿತಿ ಹಿಂದಿನ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಿಆರ್‌ಜಡ್ ಅಧಿಕಾರಿಗಳು ಪಂಚಾಯಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಡ್ಯಾಂ ನಿರ್ಮಾಣ ಆರಂಭಿಸಿದ್ದಾರೆ. ಇನ್ನಾದರೂ ನದಿ ತಟದ ಸುತ್ತಲೂ ಎತ್ತರಗೊಳಿಸಿ ರಿಂಗ್ ನಿರ್ಮಿಸಿದರೆ ವ್ಯವಸ್ಥಿತ ಕಾಮಗಾರಿ ನಡೆಯುವುದರ ಜತೆಗೆ ಗ್ರಾಮಸ್ಥರಿಗೂ ಭದ್ರತೆ ದೊರೆಯಲಿದೆ ಎಂದು ಆಗ್ರಹಿಸಿದರು.
ನಿರಾಡಿಜಡ್ಡಿನಲ್ಲಿ ಇರುವ ನೀರಿನ ಸಮಸ್ಯೆ, ಬಸ್‌ತಂಗುದಾಣಗಳಲ್ಲಿ ಮಹಿಳೆಯರಿಗೆ ಎದುರಾಗುವ ತೊಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಕುರಿತು ಗ್ರಾಮಸ್ಥರು ದನಿ ಎತ್ತಿದ್ದು, ಮಹಿಳಾ ಸುರಕ್ಷತೆ ಕುರಿತು ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಲಾಯಿತು.
ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೈ.ಬಿ.ರಾಘವೇಂದ್ರ, ನೋಡಲ್ ಅಧಿಕಾರಿ ಪ್ರಕಾಶ್ ಬಿ.ಬಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ವಿಜಯ ಭಂಡಾರಿ ಹಾಗೂ ಸಿಬ್ಬಂದಿ ಸಂತೋಷ್ ವರದಿ ವಾಚಿಸಿದರು. ಪಂಚಾಯಿತಿ ಸಿಬ್ಬಂದಿ ಸಂತೋಷ್ ಸಭೆ ನಿರೂಪಿಸಿದರು.
ಸಾಸ್ತಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಗಳಿಲ್ಲದಿರುವ ಕುರಿತು ಶ್ರೀಧರ ಪಿ.ಎಸ್ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದ್ದು, ವಾಹನ ಸವಾರರು ಜೀವಭಯದಿಂದ ಸಂಚರಿಸಬೇಕು. ಶೀಘ್ರವೇ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕು. ಹೆದ್ದಾರಿಗೆ ಹೊಂದಿಕೊಂಡಿರುವ ಲಿಂಕ್ ರೋಡ್‌ಗಳ ಹೊಂಡಗಳ ಮುಚ್ಚುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥ ಸುರೇಶ್ ಪೂಜಾರಿ ಕಾಲುದಾರಿಗಳ ದುರಸ್ತಿಗೊಳಿಸುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಈ ಸಂದರ್ಭ ಪಿಡಿಒ ಲೋಲಾಕ್ಷಿ ಶೀಘ್ರವೇ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರುಗೊಳಿಸುವ ಕುರಿತ ವಿಚಾರ ಮುನ್ನೆಲೆಗೆ ಬಂದಿದ್ದು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸುವ ಕುರಿತು ಗ್ರಾಮ ಪಂಚಾಯಿತಿ ಪ್ರತಿನಿಧಿ ಪ್ರತಾಪ್ ಶೆಟ್ಟಿ ಹಾಗೂ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ಕುರಿತು ಗ್ರಾಮಸ್ಥರು ಪಶು ವೈದ್ಯ ಸೂರಜ್ ಗಮನ ಸೆಳೆದರು. ಈ ಕುರಿತು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಕಳುಹಿಸುವ ಭರವಸೆಯನ್ನು ವೈದ್ಯಾಧಿಕಾರಿ ನೀಡಿದರು.