ಜಿಲ್ಲೆ

ಹಿಂದು ರುದ್ರಭೂಮಿ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ಬಂಟ್ವಾಳ: ನನೆಗುದಿಗೆ ಬಿದ್ದಿರುವ ಹಿಂದು ರುದ್ರಭೂಮಿ ಹಾಗೂ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈಗಾಗಲೇ ಲಭ್ಯವಿರುವ ಸ್ಥಳ ನಿಗದಿಪಡಿಸಿ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಮಂಗಳವಾರ ಗ್ರಾಮ ಪಂಚಾಯಿತಿ ವಠಾರದಲ್ಲಿ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಸಜೀಪ ಮುನ್ನೂರು ಗ್ರಾಮ ಪಂಚಾಯಿತಿಯ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.

ಸಾರ್ವಜನಿಕ ಹಿತದೃಷ್ಟಿಯ ಕಾಮಗಾರಿಗಳು ಜರುಗಿ ವರ್ಷವಾದರೂ ಗುತ್ತಿಗೆದಾರರಿಗೆ ಬಿಲ್ಲು ಪಾವತಿಸಲು ಇರುವ ತಾಂತ್ರಿಕ ಅಡಚಣೆಯನ್ನು ನಿವಾರಿಸಿ ಕಾಮಗಾರಿಯ ಬಿಲ್ ಪಾವತಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ನಂದಾವರ ಶಾಲೆಗೆ ನೂತನ ಕಟ್ಟಡ ಹಾಗೂ ಗುಡ್ಡ ಕುಸಿತ ಪ್ರದೇಶಕ್ಕೆ ಶಾಶ್ವತ ತಡೆಗೋಡೆ ಬಗ್ಗೆ ಜಿಲ್ಲಾಡಳಿತದಿಂದ ಅನುದಾನಕ್ಕೆ ಒತ್ತಾಯಿಸಲಾಯಿತು. ಮಂಗಳೂರು ನಗರಕ್ಕೆ ನೀರು ಪೂರೈಸಲು ತುಂಬೆ ಡ್ಯಾಮ್ ಸಂತ್ರಸ್ತ ರೈತರ ಜಮೀನು ಮುಳುಗಡೆಯಾದರೂ ಕೆಲವೊಂದು ರೈತರಿಗೆ ಭೂ ಪರಿಹಾರ ನೀಡಲು ನಗರಪಾಲಿಕೆ ಸತಾಯಿಸುತ್ತಿದ್ದು, ಜಿಲ್ಲಾಡಳಿತ ಕೂಡಲೇ ರೈತರಿಗೆ ನ್ಯಾಯೋಚಿತ ಪರಿಹಾರ ಒದಗಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಅಭಾವ ಉಂಟಾದಾಗ ನೇತ್ರಾವತಿ ನದಿಯ ಇಕ್ಕೆಲಗಳ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಏಕಾಏಕಿ ಸ್ಥಗಿತಗೊಳಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

ಬಂಟ್ವಾಳ ವಲಯ ಅರಣ್ಯಾಧಿಕಾರಿ ನೋಡಲ್ ಅಧಿಕಾರಿಯಾಗಿದ್ದರು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇದ್ದಾಗ ಗ್ರಾಮ ಸಭೆಯನ್ನು ಮುಂದೂಡುವಂತೆ ಆಗ್ರಹಿಸಲಾಯಿತು. ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಶರೀಫ್ ನಂದಾವರ, ಸಲೀಂ, ಇಸ್ಮಾಯಿಲ್, ಸುರೇಶ್ ಗಟ್ಟಿ, ಇದಿನಬ್ಬ, ಫಾರೂಕ್, ಮಜೀದ್, ಜುಬೇರ್, ಗಂಗಾಧರ ನಾಯಕ್ ಮೊದಲಾದವರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಸ್ವಾಗತಿಸಿ ವಂದಿಸಿದರು. ಪಂಚಾಯಿತಿ ಕಾರ್ಯದರ್ಶಿ ವರದಿ ಮಂಡಿಸಿದರು.

ಎರಡು ದಿನಕ್ಕೊಂದಾವರ್ತಿ ನೀರು ಬಳಕೆ

ಸರ್ಕಾರದ ವೆಚ್ಚದಿಂದಲೇ ನಿರ್ಮಾಣಗೊಂಡ ಏತ ನೀರಾವರಿ ಪಂಪ್‌ನ ವಿದ್ಯುತ್ ಶಕ್ತಿಯನ್ನು ಸ್ಥಗಿತಗೊಳಿಸಿರುವ ಜಿಲ್ಲಾಡಳಿತದ ಆದೇಶ ರೈತ ವಿರೋಧಿ ಧೋರಣೆ ಹೊಂದಿದ್ದು, ಕೃಷಿಯನ್ನೇ ನಂಬಿ ಜೀವಿಸುವ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ಇದಕ್ಕಾಗಿ ರೈತರ ವಿಶ್ವಾಸವನ್ನು ಪಡೆದು ಈ ಹಿಂದಿನಂತೆ ಎರಡು ದಿನಕ್ಕೊಂದಾವರ್ತಿ ರೈತರು ನದಿ ನೀರು ಬಳಸಲು ಅವಕಾಶ ನೀಡುಬೇಕು ಎಂದು ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಮನವಿ ಮಾಡಿದರು. ಗ್ರಾಮಸಭೆಯಲ್ಲಿ ಜಿಲ್ಲಾ ಆಡಳಿತಕ್ಕೆ ತಿಳಿಸಲು ನಿರ್ಣಯಿಸಲಾಯಿತು.