ಜಿಲ್ಲೆ

ಅಧಿಕಾರಿಗಳ ಗೈರಿಗೆ ಗ್ರಾಮಸ್ಥರ ಆಕ್ರೋಶ

ಕಡಬ: ಬಹುತೇಕ ಇಲಾಖಾಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರಿಂದ ಗ್ರಾಮಸಭೆ ಮುಂದೂಡಿಕೆಯಾದ ಘಟನೆ ಸೋಮವಾರ ನಡೆದಿದೆ.

ಗ್ರಾಮಸಭೆಗೆ ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮೆಸ್ಕಾಂ, ಸಮಾಜ ಕಲ್ಯಾಣ, ಕೆಎಸ್‌ಆರ್‌ಟಿಸಿ, ತೋಟಗಾರಿಕಾ, ಅರಣ್ಯ ಇಲಾಖೆ, ಗ್ರಾಮೀಣ ನೀರು, ನೈರ್ಮಲ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದು, ಉಳಿದ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದರು.

ಪ್ರತಿ ಬಾರಿಯೂ ಗ್ರಾಮಸಭೆಗೆ ಹೆಚ್ಚಿನ ಇಲಾಖೆ ಅಧಿಕಾರಿಗಳು ಗೈರು ಹಾಜರಾಗುತ್ತಿರುವ ಬಗ್ಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿತ್ತು. ಈ ಬಾರಿ ಬಹುತೇಕ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿರುವುದರಿಂದ ಗ್ರಾಮಸ್ಥರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ಮ್ಯಾಥ್ಯೂ ಟಿ.ಎಂ. ಮಾತನಾಡಿ, ಇಲಾಖಾ ಅಧಿಕಾರಿಗಳು ಬಾರದೆ ಇದ್ದರೆ ಗ್ರಾಮಸಭೆ ಯಾಕೆ? ತಾಲೂಕು ಕೇಂದ್ರಕ್ಕೆ ಸಮೀಪ ಇರುವ ಗ್ರಾಪಂಗೆ ಅಧಿಕಾರಿಗಳು ಬರುವುದಿಲ್ಲ ಅಂದರೆ ಏನರ್ಥ. 11.30ರವರೆಗೆ ಕಾದಿದ್ದೇವೆ, ಇನ್ನೂ ಕಾಯುವುದಿಲ್ಲ ಎಂದರು. ಎಲ್ಸಿ ತೋಮಸ್, ರೆಬೆಕಾ, ಸೆಬಾಸ್ಟಿಯನ್ ಸೇರಿದಂತೆ ಹಲವಾರು ಗ್ರಾಮಸ್ಥರು ಗೈರು ಹಾಜರಾಗಿರುವ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಿರ್ಣಯ ಬರೆದು ಗ್ರಾಮಸಭೆ ಮುಂದೂಡಲಾಯಿತು.

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಸುರೇಶ್ ನೋಡಲ್ ಅಧಿಕಾರಿಯಾಗಿದ್ದರು. ಗ್ರಾಪಂ ಅಧ್ಯಕ್ಷೆ ಸುಮನ, ಸದಸ್ಯರಾದ ಮೋಹನ ಕೆರೆಕೋಡಿ, ಮಾಧವಿ, ವಿಜಯ ಡಿ., ವಲ್ಸಮ್ಮ, ಎ.ಜೆ.ವಾಣಿ ನಾಗೇಶ್, ಲಕ್ಷ್ಮೀಶ ಬಂಗೇರ, ಮೋಹಿನಿ, ಮಹಮ್ಮದಾಲಿ, ಸುಧೀರ್ ದೇವಾಡಿಗ, ಕಿರಣ್ ಗೋಗಟೆ, ಸಂತೋಷ್ ದೋಳ, ಮೀನಾಕ್ಷಿ ನೆಲ್ಲ, ಪಿಡಿಒ ಆನಂದ, ಕಾರ್ಯದರ್ಶಿ ಗೋಪಿನಾಥ್ ಡಿ. ಉಪಸ್ಥಿತರಿದ್ದರು. ಪಂಚಾಯಿತಿ ಸಿಬ್ಬಂದಿ ಜಿತೇಶ್ ನಾಲೂರು, ತಾರಾನಾಥ, ಉಮೇಶ್ ಸಹಕರಿಸಿದರು.