ಜಿಲ್ಲೆ

ಕೊಲೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪೊಲೀಸ್ ವಶಕ್ಕೆ!; ಕಾರು ಡಿಕ್ಕಿ ಹೊಡೆಸಿ ಕೊಲೆಗೈದ ಆರೋಪ

ಉಡುಪಿ: ಕೊಲೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಕೊಲೆ ಆರೋಪಿ.

ಪ್ರಾಣೇಶ್ ಯಡಿಯಾಳ ಅವರ ಕಾರು ನಿನ್ನೆ ರಾತ್ರಿ ಯಡಮೊಗೆ ನಿವಾಸಿ ಉದಯ ಗಾಣಿಗ (45) ಎಂಬವರಿಗೆ ಡಿಕ್ಕಿ ಹೊಡೆದಿದ್ದು, ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದರು. ಈ ಅಪಘಾತದ ಬಳಿ ಪ್ರಾಣೇಶ್ ಅಲ್ಲಿಂದ ಪರಾರಿಯಾಗಿದ್ದು, ಕೊಲೆ ಮಾಡುವ ಉದ್ದೇಶದಿಂದಲೇ ಬೇಕಂತಲೇ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪರಾರಿಯಾಗಿದ್ದ ಪ್ರಾಣೇಶ್​ ನಿನ್ನೆ ತಡರಾತ್ರಿ ಉಳ್ಳೂರು-74 ಗ್ರಾಮ ಪಂಚಾಯತ್ ಸದಸ್ಯರ ಮನೆಯಲ್ಲಿದ್ದ ಕುರಿತು ಸುಳಿವು ಪಡೆದ ಶಂಕರನಾರಾಯಣ ಪೊಲೀಸರು ಅಲ್ಲಿಗೆ ತೆರಳಿ ಪ್ರಾಣೇಶ್​ನನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರಾಣೇಶ್​ ಅಕ್ರಮ ಎಸಗುತ್ತಿದ್ದು, ಅದನ್ನು ಪ್ರಶ್ನಿಸಿ ಉದಯ ಗಾಣಿಗ ಸ್ಟೇಟಸ್​ ಹಾಕಿಕೊಂಡಿದ್ದರ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಅಲ್ಲದೆ ಉದಯ ಅವರು ಪ್ರಾಣೇಶ್ ಕಾರ್ಯವೈಖರಿಯನ್ನು ಆಗಾಗ ಪ್ರಶ್ನೆ ಮಾಡಿದ್ದರಿಂದ ಅವರು ಉದಯ ವಿರುದ್ಧ ದ್ವೇಷ ಹೊಂದಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.