ಜಿಲ್ಲೆ

ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ: ಫೋನ್-ಇನ್ ಕಾರ್ಯಕ್ರಮದಲ್ಲಿ ಡಿಸಿಪಿಗಳು- ಲಾಕ್​ಡೌನ್​ನಿಂದ ಆಗುತ್ತಿರುವ ಸಮಸ್ಯೆ ವಿವರಿಸಿದ ಜನ

ಬೆಂಗಳೂರು: ಕರೊನಾ ಭೀತಿ ನಡುವೆಯೂ ನಗರದಲ್ಲಿ ಪೊಲೀಸರು ಕೈಗೊಂಡಿರುವ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ದಿಗ್ವಿಜಯ 247 ನ್ಯೂಸ್ ಹಾಗೂ ವಿಜಯವಾಣಿ ಶನಿವಾರ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ, ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾ ಶಂಕರ್ ಎಸ್.ಗುಳೇದ್, ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು.

ಕರೆ ಮಾಡಿದ ಹಲವರು ಕರೊನಾ ಸಂದರ್ಭದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಲಾಕ್​ಡೌನ್ ಸಂದರ್ಭದಲ್ಲಿ ತಮಗಿದ್ದ ಗೊಂದಲ ಬಗೆಹರಿಸಿಕೊಂಡರು. ಏ.20ರ ಬಳಿಕ ಲಾಕ್​ಡೌನ್ ಸಡಿಲಗೊಳ್ಳುವ ಸಾಧ್ಯತೆ ಯಿದೆ. ಕರೊನಾ ವಿರುದ್ಧ ಎಲ್ಲರೂ ಹೋರಾಡಬೇಕಾದ ಅಗತ್ಯವಿದೆ. ತುರ್ತಾಗಿ ಆಸ್ಪತ್ರೆಗೆ ಹೋಗುವವರಿಗೆ ಆಯಾ ಠಾಣೆಗಳಲ್ಲಿ 12 ಗಂಟೆ ಅವಧಿಗೆ ಪಾಸ್​ಗಳನ್ನು ನೀಡಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಡಿಸಿಪಿಗಳು ಜನರಿಗೆ ತಿಳಿಸಿದರು.
ಕರೊನಾ ಸೋಂಕು ತಡೆಗೆ ಸಿಬ್ಬಂದಿಗೆ ರ‍್ಯಾಪಿಡ್ ಕಿಟ್ ಚೆಕ್​ಪೋಸ್ಟ್​ಗಳಲ್ಲಿ ಹೆಚ್ಚಿನ ನಿಗಾ ಇರಿಸಿದ್ದೇವೆ. ಸಾರ್ವಜನಿಕ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಳಹಂತದ ಸಿಬ್ಬಂದಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್, ಮಾಸ್ಕ್ ವಿತರಿಸಿದ್ದೇವೆ. ಪಶ್ಚಿಮ ವಿಭಾಗದ ಜೆ.ಜೆ. ನಗರ, ಬಾಪೂಜಿನಗರ, ಟಿಪ್ಪುನಗರದಲ್ಲಿ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ನಮ್ಮ ಸಿಬ್ಬಂದಿಗೆ ರ‍್ಯಾಪಿಡ್ ಕಿಟ್ ಕೊಡುತ್ತೇವೆ. ನಮ್ಮ ವ್ಯಾಪ್ತಿಯಿಂದ ದೆಹಲಿಯ ನಿಜಾಮುದ್ದೀನ್​ಗೆ ಭೇಟಿ ನೀಡಿದವರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಭೇಟಿ ನೀಡಿದ ಕಾರಣ ಅವರ ಸಂಪರ್ಕದಲ್ಲಿದ್ದ ಇತರರನ್ನು ಪತ್ತೆಹಚ್ಚಲು ಸಾಧ್ಯವಾಯಿತು. | ರಮೇಶ್ ಬಾನೋತ್ ಡಿಸಿಪಿ, ಪಶ್ಚಿಮ ವಿಭಾಗ ಜನರ ಸಹಕಾರ ಸುದೀರ್ಘ ಕಾಲ ಲಾಕ್​ಡೌನ್ ಇರುವುದರಿಂದ ಜನ ಸಾಮಾನ್ಯರಿಗೆ ಮೂಲಸೌಕರ್ಯ ಸಿಗುವಂತೆ ನೋಡಿಕೊಂಡಿದ್ದೇವೆ. ಜನ ಪೊಲೀಸರಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಲು ಸಾಧ್ಯವಾಗಿದೆ. | ಡಾ.ಭೀಮಾಶಂಕರ್ ಗುಳೇದ್ ಡಿಸಿಪಿ-ಈಶಾನ್ಯ ವಿಭಾಗ ತೊಂದರೆ ಆಗದಂತೆ ನೋಡಿಕೊಳ್ಳಬೇಕು ನಮ್ಮ ವ್ಯಾಪ್ತಿಯಲ್ಲಿ ಡಿ.ಜಿ. ಹಳ್ಳಿ, ಕೆ.ಜಿ. ಹಳ್ಳಿ, ಶಿವಾಜಿನಗರ ಸೂಕ್ಷ್ಮ ಪ್ರದೇಶಗಳಾಗಿವೆ. ಇಲ್ಲಿ ಸದಾ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್ ಪಾಲನೆ ಜತೆಗೆ ಜನರಿಗೆ ತೊಂದರೆಗಳಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆರಂಭದಲ್ಲಿ ಕಷ್ಟವಾದರೂ ನಂತರದ ದಿನಗಳಲ್ಲಿ ಜನರ ಸಹಕಾರದಿಂದ ಪೊಲೀಸರು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. | ಡಾ.ಎಸ್.ಡಿ. ಶರಣಪ್ಪ ಡಿಸಿಪಿ, ಪೂರ್ವ ವಿಭಾಗ

ಪ್ರಶ್ನೋತ್ತರ

ನಾವು ಇಂದಿರಾನಗರದ ಪಿ.ಜಿ.ಯಲ್ಲಿ ವಾಸಿಸುತ್ತಿದ್ದೇವೆ. ಮನೆ ಮಾಲೀಕರು ಬಾಡಿಗೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಏನು ಮಾಡಬೇಕು ?

| ಸೌಮ್ಯಾ ಇಂದಿರಾನಗರ

ಇಂದಿರಾನಗರ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದರೆ ಪೊಲೀಸರು ತನಿಖೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುತ್ತಾರೆ.

ವಿದ್ಯಾರಣ್ಯಪುರದಲ್ಲಿರುವ ಮಗನ ಮನೆಗೆ ಬಂದಿದ್ದೇನೆ. ಊರಿನಲ್ಲಿ ನನಗೆ ಹೊಲ, ಗದ್ದೆ ಇದೆ. ಈಗ ಮನೆಗೆ ಹೋಗದಿದ್ದರೆ ಬೆಳೆ ಹಾನಿಯಾಗುತ್ತದೆ. ಊರಿಗೆ ಹೋಗಲು ಅವಕಾಶ ನೀಡುವಿರಾ?

| ಉಮಾಶಂಕರ್ ವಿದ್ಯಾರಣ್ಯಪುರ

ಏ.20ರ ವರೆಗೂ ಊರಿಗೆ ಹೋಗಲು ಅವಕಾಶವಿಲ್ಲ. ನಿಮ್ಮ ನೆರೆಹೊರೆಯವರು, ಸ್ನೇಹಿತರಿಗೆ ಸ್ವಲ್ಪ ಸಮಯ ಹೊಲ ನೋಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಬಹುದು.

ಕೇಬಲ್ ಆಪರೇಟರ್​ಗಳ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವುದರಿಂದ ಅವರಿಗೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

| ಸುಬ್ರಹ್ಮಣ್ಯ ಆಗ್ನೇಯ ವಿಭಾಗ

ಗೂಡ್ಸ್ ಹಾಗೂ ಇನ್ನೀತರ ಅಗತ್ಯ ಸೇವೆಗೆ ಕೆಎಸ್​ಪಿ ಕ್ಲೀಯರ್ ಪಾಸ್ ಇದೆ. ಇದನ್ನು ಬಳಿಸಿಕೊಳ್ಳಬಹುದು.

ನನ್ನ ಬೈಕ್ ಪಡೆಯಲು ಸ್ನೇಹಿತನ ಬೈಕ್​ನಲ್ಲಿ ಠಾಣೆಗೆ ತೆರಳಿದಾಗ ಆ ಬೈಕ್​ನ್ನೂ ವಶಕ್ಕೆ ಪಡೆದಿದ್ದಾರೆ. ಬೈಕ್ ಹಿಂಪಡೆದುಕೊಳ್ಳುವುದು ಹೇಗೆ?

| ಹರೀಶ್ ನಾಗರಬಾವಿ

ಲಾಕ್​ಡೌನ್ ಮುಕ್ತಾಯಗೊಳ್ಳುವವರೆಗೂ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಲಾಕ್​ಡೌನ್ ಮುಗಿದ ಬಳಿಕ ವಾಹನ ಹಿಂತಿರುಗಿಸಲಾಗುವುದು.