ಜಿಲ್ಲೆ

ವಿಜಯ ಬ್ಯಾಂಕ್ ಚೇರ್ಮನ್ ಆಗಿದ್ದ ಸದಾನಂದ ಶೆಟ್ಟಿ ನಿಧನ..

ಬೆಂಗಳೂರು: ವಿಜಯ ಬ್ಯಾಂಕ್​ನ ಚೇರ್ಮನ್ ಆಗಿದ್ದ ಕೆ. ಸದಾನಂದ ಶೆಟ್ಟಿ ಅವರು ನಿಧನರಾದರು. ಸೋಹಂ ಗ್ರೂಪ್ ಆಫ್ ಕಂಪನೀಸ್​ ಸಂಸ್ಥಾಪಕ ಹಾಗೂ ಚೇರ್ಮನ್ ಕೂಡ ಆಗಿದ್ದ ಅವರು ಇಂದು ಫ್ರಾನ್ಸ್​ನಲ್ಲಿ ಕೊನೆಯುಸಿರೆಳೆದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಸದಾನಂದ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಿದ್ದು, ಇಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಶೆಟ್ಟಿ ಅವರು 1937ರ ಮೇ 6ರಂದು ಮಂಗಳೂರಿನ ಕೊಡಿಯಾಲ್​ಬೈಲ್​ನಲ್ಲಿ ಜನಿಸಿದ್ದರು. ಅವರು ಪತ್ನಿ ಸುಜಾತ ಶೆಟ್ಟಿ, ಪುತ್ರರಾದ ಸಂಜಿತ್ ಶೆಟ್ಟಿ ಮತ್ತು ಸುಚಿಂದ್ರ ಶೆಟ್ಟಿ ಅವರನ್ನು ಅಗಲಿದ್ದಾರೆ.

ಈಗ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಂಡಿರುವ ವಿಜಯ ಬ್ಯಾಂಕ್​ಗೆ 1983ರಿಂದ 90ರ ವರೆಗೆ ಸದಾನಂದ ಶೆಟ್ಟಿ ಚೇರ್ಮನ್ ಆಗಿದ್ದರು. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​ನ ಉಪಾಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಏರ್ ಇಂಡಿಯಾ, ಇಂಡಸ್ಟ್ರಿಯಲ್ ರಿಕನ್​ಸ್ಟ್ರಕ್ಷನ್​ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ಮಂಡಳಿಯಲ್ಲೂ ಅವರು ಒಬ್ಬರಾಗಿದ್ದರು.

ರಿನೀವೇಬಲ್ ಎನರ್ಜಿ ಡೆವಲಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಈಗಿನ ಅಧ್ಯಕ್ಷರಾಗಿಯೂ ಅವರು ಅಧಿಕಾರದಲ್ಲಿದ್ದರು. 2004ರಲ್ಲಿ ಅವರು ಸೋಹಂ ರಿನೀವೇಬಲ್ ಎನರ್ಜಿ ಗ್ರೂಪ್ ಆಫ್ ಕಂಪನೀಸ್ ಸ್ಥಾಪನೆ ಮಾಡಿದ್ದರು.