ವಿಜಯವಾಣಿ ಸುದ್ದಿಜಾಲ ಹೆಬ್ರಿ
ಮಕ್ಕಳಿಗೆ ಕಾಲ ಕಾಲಕ್ಕೆ ಗುಣಮಟ್ಟದ ಶಿಕ್ಷಣದ ಜತೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಿ, ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಚಿಂತನೆ ನಡೆಸಿ ಪ್ರೋತ್ಸಾಹ ನೀಡುವ ಸಂಸ್ಥೆಯ ಶೈಕ್ಷಣಿಕ ಸಹಮಿಲನ ಯಶಸ್ವಿಯಾಗಿ ನಡೆಯಲಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಎಳ್ಳಾರೆಯ ಜನಾರ್ಧನ ಶಾಲೆ ಆಶ್ರಯದಲ್ಲಿ ವಿದ್ಯಾಭಾರತಿ ಸಂಸ್ಥೆ ಶನಿವಾರ ಆಯೋಜಿಸಿದ್ದ 17ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನದಲ್ಲಿ ಅವರು ಮಾತನಾಡಿದರು. ಬಳಿಕ ಶಾಸಕರು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಿದ್ಯಾಭಾರತಿ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಸ್ತಾವನೆಗೈದರು. ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ, ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ, ಶ್ರೀ ಜನಾರ್ದನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಕಿಣಿ, ಸಂಚಾಲಕ ನಂದಕುಮಾರ್, ಕಾರ್ಯದರ್ಶಿ ಸಂತೋಷ್ ಹೆಗ್ಡೆ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಅಶ್ವಿನಿ ಹೆಗ್ಡೆ ಸ್ವಾಗತಿಸಿದರು. ಶಕುಂತಲಾ ಮಾತಾಜಿ ವಂದಿಸಿದರು. ಅಕ್ಷತಾ ನಿರೂಪಿಸಿದರು.
ಎಸ್‌ಎಸ್‌ಎಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು, ವಿಜ್ಞಾನ ಮೇಳದ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ, ಶಾಂತಿಧಾಮ ತಂಡದ ಶಿಕ್ಷಕ ಕಲಾವಿದರನ್ನು ಗೌರವಿಸಲಾಯಿತು. ಸಮಾರೋಪದಲ್ಲಿ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ವಿಶೇಷ ಉಪನ್ಯಾಸ ನೀಡಿದರು. ನೈತಿಕ ಮತ್ತು ಆಧ್ಯಾತ್ಮಿಕ ಪ್ರಮುಖ್ ವೆಂಕಟರಮಣ ಮಂಕುಡೆ ಮಾತನಾಡಿದರು.