ಮೂಡುಬಿದಿರೆ: ನಿರಂತರ ಪರಿಶ್ರಮದಿಂದ ಉತ್ತಮ ಸಾಧನೆಯೊಂದಿಗೆ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳುವುದು ಅಗತ್ಯವಿದೆ. ಹೊಸ ತಂತ್ರಜ್ಞಾನದ ಮೂಲಕ ಸಿಗುವ ಶಿಕ್ಷಣವನ್ನೂ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಶಿವರಾಮ ಶಿಶಿಲ ಹೇಳಿದರು.
ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ವೈಬ್ರೆಂಟ್ ಶಿಕ್ಷಣ ಚೇತನ 2025 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಮೆಹಬೂಬ್ ಬಾಷಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಶ್ರೀಪತಿ ಭಟ್, ಟ್ರಸ್ಟಿಗಳಾದ ಡಾ.ಎಸ್.ಎನ್.ವೆಂಕಟೇಶ್ ನಾಯಕ್, ಚಂದ್ರಶೇಖರ ರಾಜೇ ಅರಸ್, ಯೋಗೇಶ್ ಬೆಡೆಕರ್, ಶರತ್ ಗೋರೆ, ಸುಭಾಷ್ ಝಾ, ಶಿವರಾಮ ಶಿಶಿಲರ ಪುತ್ರ, ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಚಂದ್ರ ಶಿಶಿಲ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರಿಗೆ ಪ್ರಶಂಸಾ ಪತ್ರ ನೀಡಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ನಿತಿನ್ ಪಿ.ಎಸ್.ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವ ಉಪನ್ಯಾಸಕರ ಪ್ರಶಂಶಾ ಪತ್ರ ಪಟ್ಟಿ ವಾಚಿಸಿದರು. ಕನ್ನಡ ಉಪನ್ಯಾಸಕಿ ಅಪರ್ಣಾ ನಿರೂಪಿಸಿ, ಆಶಿಕಾ ಕಿರಣ್‌ವಂದಿಸಿದರು.