ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಸಿವಿಲ್ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ಏ.8 (ಮಂಗಳವಾರ)ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತೀಯ ಕಾರ್ಯದರ್ಶಿ ಜಗನ್ನಾಥ ಶಾಸಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಜಾತಿ ಆಧಾರಿತವಾಗಿ ಮೀಸಲಾತಿ ಒದಗಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾಗಿರುವ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಕೇವಲ ಓಲೈಕೆ ರಾಜಕಾರಣ, ಮತಬ್ಯಾಂಕ್ ರಾಜಕೀಯ ಎಂದು ಟೀಕಿಸಿದರು.
2005ರಲ್ಲಿ ಆಂಧ್ರಪ್ರದೇಶ ಸರ್ಕಾರ ಶಿಕ್ಷಣ ಸಂಸ್ಥೆಗ ನೇಮಕಾತಿ ವಿಷಯದಲ್ಲಿ ಇದೇ ರೀತಿ ಜಾತಿ ಆಧಾರಿತ ಮೀಸಲಾತಿಯನ್ನು ಪ್ರಕಟಿಸಿದಾಗ ಆಂಧ್ರಪ್ರದೇಶದ ಹೈಕೋರ್ಟ್ ಅದನ್ನು ರದ್ದುಗೊಳಿಸಿದ್ದು, ಈ ವರೆಗೆ ಆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ತೀರ್ಪು ಹೊರ ಬಿದ್ದಿಲ್ಲ. ಆದ್ದರಿಂದ ರಾಜ್ಯ ಸರ್ಕಾರದ ತೀರ್ಮಾನವೂ ಕೂಡ ಅಸಿಂಧುವಾಗಲಿದೆ. ಪಶ್ಚಿಮ ಬಂಗಾಳದ ಮತ್ತೊಂದು ಪ್ರಕರಣದಲ್ಲಿ ಕೂಡಾ ಸರ್ವೋಚ್ಛ ನ್ಯಾಯಾಲಯ ಜಾತಿ ಆಧಾರಿತ ಮೀಸಲಾತಿಯನ್ನು ಅಸಂವಿಧಾನಿಕವೆಂದು ಸೂಚಿಸಿದೆ. ಈ ಕುರಿತು ಈಗಾಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಏ.8ರಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ವಿಹಿಂಪ ಎಲ್ಲಾ ಜಿಲ್ಲಾ ಘಟಕಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿವೆ. ರಾಜ್ಯ ಘಟಕದಿಂದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದ್ದು, ನಾಡಿನ ವಿವಿಧ ಸಂತರು, ಮುಖಂಡರು ಪಾಲ್ಗೊಂಡು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಪದಾಧಿಕಾರಿಗಳಾದ ದೀಪಕ್ ರಾಜಗೋಪಾಲ, ರಾಮಚಂದ್ರರಾವ್, ಪ್ರಕಾಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
"ರಾಜ್ಯ ಸರ್ಕಾರ ಅಸಂವಿಧಾನಿಕ ಧೋರಣೆಯನ್ನು ಹೊಂದಿದ್ದು, ಧರ್ಮಾಧಾರಿತ ಓಲೈಕೆಯಲ್ಲಿ ತೊಡಗಿದೆ. ದೇಶದ ಅಭಿವೃದ್ಧಿ, ಪ್ರಜೆಗಳ ಹಿತ ಸರ್ಕಾರಕ್ಕೆ ಬೇಕಾಗಿಲ್ಲ. ಹಿಂದೆ ಇದೇ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯತ ಧರ್ಮ ವಿಭಜನೆ ಮುಂದಾಗಿ ಪತನವಾಗಿತ್ತು. ಮತ್ತೆ ಅದೇ ಸ್ಥಿತಿ ತಲುಪಬಾರದೆಂದರೆ ನಿರ್ಧಾರದಿಂದ ಹಿಂದೆ ಸರಿಯಲಿ."-ಶ್ರೀ ನಾರಾಯಣಾನಂದ ಸರಸ್ವತಿ ಸ್ವಾಮೀಜಿ, ಧರ್ಮ ಪ್ರಚಾರಕರು