ಬೆಂಗಳೂರು: ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದವನಿಗೆ ಚಿಕನ್ ಡಿಶ್ ಡೆಲಿವರ್ ಮಾಡಿದ ಆನ್ಲೈನ್ ಫುಡ್ ಡೆಲಿವರಿ ಕಂಪೆನಿಯೊಂದಕ್ಕೆ ಗ್ರಾಹಕರ ನ್ಯಾಯಾಲಯವು 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರಿನ ನಿವಾಸಿ ವಿ.ಬಿ.ನಾಗೇಂದ್ರ ಎಂಬುವರು 2018 ರ ಏಪ್ರಿಲ್ 23 ರಂದು ಕೆಲಸದ ನಡುವೆ ಫ್ರೆಶ್ ಮೆನು ಆನ್ಲೈನ್ ಫುಡ್ ಪೋರ್ಟಲ್ನಲ್ಲಿ 'ಕಾಪ್ರೀಸ್ ಖಿನೋವಾ' ಎಂಬ ಸಸ್ಯಾಹಾರಿ ಡಿಶ್ ಆರ್ಡರ್ ಮಾಡಿದರು. ವೆಜಿಟೇರಿಯನ್ ಎಂದು ಮಾರ್ಕ್ ಮಾಡಲಾದ ಬಾಕ್ಸ್ನಲ್ಲಿ ಅವರಿಗೆ ಆಹಾರವನ್ನು ಡೆಲಿವರಿ ಮಾಡಲಾಯಿತು. ಆದರೆ ಅದನ್ನು ತೆಗೆದು ಸೇವಿಸಿದಾಗ ಅವರಿಗೆ ಅದು ಚಿಕನ್ ಡಿಶ್ ಆಗಿರುವುದು ತಿಳಿದುಬಂತು.
ತಕ್ಷಣ ಕಂಪೆನಿಯ ಹೆಲ್ಪ್ಲೈನಿಗೆ ಕರೆ ಮಾಡಿದಾಗ, ಅವರು ಕ್ಷಮೆ ಕೇಳಿ ಅವರ ಹಣವನ್ನು ಕೂಡಲೇ ವಾಪಸ್ ಮಾಡುವುದಾಗಿ ತಿಳಿಸಿದರು. ಆದರೆ ಕಟ್ಟಾ ಸಸ್ಯಾಹಾರಿಯಾದ ನಾಗೇಂದ್ರ ಅವರಿಗೆ ಈ ಅನುಭವ ನುಂಗಲಾರದ ತುತ್ತಾಗಿತ್ತು. ಈ ಬಗ್ಗೆ ಕಂಪೆನಿಗೆ ಲೀಗಲ್ ನೋಟೀಸ್ ಕೊಟ್ಟು, ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಕೇಸು ದಾಖಲಿಸಿದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ಸೇವೆಯಲ್ಲಿ ನ್ಯೂನತೆ ಉಂಟಾಗಿದೆ ಎಂದು ತೀರ್ಪು ನೀಡಿದೆ. ಆಹಾರದ ಬೆಲೆಯಾಗಿದ್ದ 210 ರೂಪಾಯಿಯನ್ನು ರೀಫಂಡ್ ಮಾಡುವ ಜೊತೆಗೆ ಕಂಪೆನಿಯು ನಾಗೇಂದ್ರ ಅವರಿಗೆ 5,000 ರೂ. ಪರಿಹಾರ ಮತ್ತು 5,000 ರೂ. ಕೋರ್ಟ್ ವೆಚ್ಚವಾಗಿ ನೀಡಬೇಕೆಂದು ಆದೇಶಿಸಿದೆ.(ಏಜೆನ್ಸೀಸ್)