ಜಿಲ್ಲೆ

ನ.15ರಿಂದ ಮೂರು ದಿನ ವೀರಲೋಕ ಪುಸ್ತಕ ಸಂತೆ

ಬೆಂಗಳೂರು: ವೀರಲೋಕ ಸಂಸ್ಥೆಯ ಪುಸ್ತಕ ಸಂತೆಯ ಯಶಸ್ವಿಯಾದ ಬೆನ್ನಲ್ಲೇ 2ನೇ ಸರಣಿಗೆ ಸಂಸ್ಥೆ ಸಿದ್ಧತೆ ನಡೆಸಿದೆ. ಮುಂಬರುವ ನ.15, 16, 17 ರಂದು ಜಯನಗರದ ಶಾಲಿನಿ ಮೈದಾನದಲ್ಲಿ ಪುಸ್ತಕ ಸಂತೆ ಆಯೋಜಿಸಿರುವುದಾಗಿ ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

ವೀರಲೋಕ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಹಲವು ಸಾಹಿತ್ಯ ಕಾರ್ಯಕ್ರಮ ಮತ್ತು ವಿನೂತನ ಯೋಜನೆಗಳ ಮೂಲಕ ಕನ್ನಡಿಗರ ಮನೆ ಮಾತಾಗಿದೆ. ಅಂಥಹ ಕಾರ್ಯಕ್ರಮಗಳಲ್ಲಿ ಪುಸ್ತಕ ಸಂತೆ ಕೂಡಾ ಒಂದು.

ಮೂರು ದಿನ ನಡೆಯುವ ಈ ಪುಸ್ತಕ ಸಂತೆಗೆ ರಾಜ್ಯದ ವಿವಿಧೆಡೆಗಳಿಂದ ನೂರಕ್ಕೂ ಹೆಚ್ಚು ಪ್ರಕಾಶಕರು ಆಗಮಿಸಲಿದ್ದಾರೆ. ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪುಸ್ತಕ ಮಳಿಗೆಗಳ ಜೊತೆಗೆ ಆಹಾರ, ಆರೋಗ್ಯ, ವಸ್ತ್ರ, ಚಿತ್ರಕಲೆ, ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ಇತರೆ ಮಳಿಗೆಗಳು ಸಂತೆಯಲ್ಲಿ ಇರಲಿವೆ. ಮಕ್ಕಳಿಗಾಗಿಯೇ ವಿಶೇಷವಾದ ಆಟದ ಮತ್ತು ಮನೋರಂಜನೆಯ ಪರಿಕರಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಇದೇ ಮೊದಲಬಾರಿಗೆ ಪುಸ್ತಕ ಮಳಿಗೆಯಲ್ಲಿ ಸ್ವತಃ ಲೇಖಕರೇ ಓದುಗರೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರತಿದಿನ ಸಂಜೆ ಜಾನಪದ ಸಂಜೆ, ಭಾವಗೀತೆ ಸಂಜೆ, ಚಲನಚಿತ್ರಗೀತೆ ಸಂಜೆ ಎಂಬ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೂರು ದಿನಗಳಲ್ಲಿ 20 ಪುಸ್ತಕಗಳು ಲೋಕಾರ್ಪಣೆಯಾಗಲಿವೆ. ಒಂದು ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ.

ಪುಸ್ತಕ ಮಳಿಗೆ ಬುಕ್ ಮಾಡುವವರು ಹೆಚ್ಚಿನ ಮಾಹಿತಿಗೆ ದೂ.7022122121 ಸಂಪರ್ಕಿಸಬಹುದು.