

ಬೆಂಗಳೂರು: ನಗರದ ಟೀ ವ್ಯಾಪಾರಿಯೊಬ್ಬರ ಖಾತೆಗೆ ಬರೋಬ್ಬರಿ 999 ಕೋಟಿ ರೂಪಾಯಿ ಜಮೆ ಆಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆ್ ಮ್ಯಾನೇಜ್ಮೆಂಟ್ ಕ್ಯಾಂಪಸ್ನಲ್ಲಿ ಟೀ,ಕಾಫಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಎಸ್.ಪ್ರಭಾಕರ್ ಎಂಬುವವರ ಖಾತೆಗೆ ಬೃಹತ್ ಮೊತ್ತದ ಹಣ ಜಮೆಯಾಗಿರುವ ಬಗ್ಗೆ ವರದಿಯಾಗಿದೆ.
ಸೆಂಟ್ರಲ್ ಬ್ಯಾಂಕ್ ಆ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿರುವ ಪ್ರಭಾಕರ್ ಖಾತೆಗೆ 999 ಕೋಟಿ ರೂಪಾಯಿ ಹಣ ಜಮೆಯಾಗಿರುವ ಮೆಸೇಜ ಬಂದಾಗ ಮೊದಲಿಗೆ ಯಾವುದೋ ಫೇಕ್ ಮೆಸೇಜ್ ಎಂದುಕೊಂಡಿದ್ದರು. ನಂತರ ಪರಿಶೀಲಿಸಿದಾಗ ಹಣ ಜಮೆಯಾಗಿರೋದು ದೃಢಪಟ್ಟಿತ್ತು. ಆದರೆ ಹಣ ಜಮೆಯಾದ ಮರುಕ್ಷಣವೇ ಪ್ರಭಾಕರ್ ಖಾತೆಯನ್ನು ಬ್ಯಾಂಕಿನವರು ಸ್ಥಗಿತ (ಫ್ರೀಝ್) ಗೊಳಿಸಿದ್ದಾರೆ. ಇದರಿಂದಾಗಿ ಇದೇ ಖಾತೆಯ ನೆರವಿನಿಂದ ಎಲ್ಲ ಆನ್ಲೈನ್ ವಹಿವಾಟು ನಡೆಸುತ್ತಿರುವ ಪ್ರಭಾಕರ್, ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗದೆ ಬಹಳ ತೊಂದರೆ ಅನುಭವಿಸುವಂತಾಗಿದೆ. ಅಂಗಡಿ ವ್ಯವಹಾರದ ಮೇಲೂ ಪರಿಣಾಮ ಬೀರಿದ್ದು, ದಿನನಿತ್ಯದ ಬದುಕಿಗೂ ತೊಂದರೆಯಾಗಿದೆ ಎಂದು ಪ್ರಭಾಕರ್ ಹೇಳಿದ್ದಾರೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯ ಎಡವಟ್ಟಿನಿಂದ ಈ ಘಟನೆ ಸಂಭವಿಸಿದ್ದು, ತಪ್ಪು ಅರಿವಾದ ಕೂಡಲೇ ಪ್ರಭಾಕರ್ ಖಾತೆ ಫ್ರೀಝ್ ಮಾಡಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಎಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರಭಾಕರ್ ಅವರ ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳುತ್ತಿದ್ದಾರೆ. ಪ್ರಭಾಕರ್ ತಾವು ಮಾಡದ ತಪ್ಪಿಗೆ ಉದ್ಯೋಗವನ್ನು ಬಿಟ್ಟು ಬ್ಯಾಂಕಿಗೆ ಅಲೆದಾಡುವಂತಾಗಿದೆ. ದಸರಾ, ಶನಿವಾರ-ಭಾನುವಾರದ ಕಾರಣಕ್ಕೆ ಸಾಲು ಸಾಲು ರಜೆ ಇರುವ ಕಾರಣ ಪ್ರಕರಣ ನಡೆದು ಮೂರು ದಿನವಾದರೂ ಇನ್ನೂ ಪರಿಹಾರ ಮಾತ್ರ ಸಿಕ್ಕಿಲ್ಲ. ಇದರಿಂದ ಯಾಕಾದರೂ ಖಾತೆಗೆ ಹಣ ಜಮೆಯಾಗಿದೆಯೋ ಎಂದು ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.