ಬಾಗಲಕೋಟೆ: ರಾಜ್ಯದಲ್ಲಿ ಲೋಕಸಭೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟಿಕೆಟ್ ಕೈ ತಪ್ಪಿದ್ದಕ್ಕೆ ಪ್ರಬಲ ಆಕಾಂಕ್ಷಿಗಳು ಸ್ವಪಕ್ಷದ ವಿರುದ್ಧವೇ ಬಂಡಾಯ ಏಳುತ್ತಿದ್ದು ಇದು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರ ನಡುವೆಯೇ ಬಾಗಲಕೋಟೆ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರವಾಗಿ ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್ ಶನಿವಾರ (ಏಪ್ರಿಲ್ 06) ಬೆಂಬಲಿಗರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ.
ಸಬೆ ಬಳಿಕ ಮಾತನಾಡಿದ ವೀಣಾ, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಕೆಲವರು ಪಕ್ಷೇತರ ಸ್ಪರ್ಧೆ ಮಾಡಿ ಎಂದು ಹೇಳಿದ್ದಾರೆ. ಕೆಲವರು ಪಕ್ಷದಲ್ಲಿ ಸ್ಥಾನಮಾನ ನೀಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ. ಇನ್ನು ಕೆಲವರು ತಟಸ್ಥರಾಗಿ ಉಳಿಯಿರಿ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ನಿರ್ಧಾರವನ್ನು ಯುಗಾದಿ ಹಬ್ಬದ ಬಳಿಕ ತಿಳಿಸುತ್ತೇನೆ.
ಬೆಂಬಲಿಗರಿಗೆ ಅವರವರ ಭಾಗದಲ್ಲಿ ಸರ್ವೇ ಮಾಡಿಸುವಂತೆ ಸೂಚಿಸಿದ್ದೇನೆ. ಜೊತೆಗೆ ಶಿವಾನಂದ ಪಾಟೀಲ್ ಹಾಗೂ ಸಂಯುಕ್ತಾ ಮನೆಗೆ ಬಂದ್ರೆ ಕೂರಿಸಿ ಮಾತನಾಡುವೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸುತ್ತೇನೆ. ಬಳಿಕ ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ ಎಂದು ವೀಣಾ ಕಾಶಪ್ಪನವರ್ ಬೆಂಬಲಿಗರ ಸಭೆ ಬಳಿಕ ಹೇಳಿದ್ದಾರೆ.