ಉಗ್ರರ ಕುರಿತು ರಾಜ್​ನಾಥ್​ ಸಿಂಗ್​ ಹೇಳಿಕೆ; ಸಚಿವರ ಹೇಳಿಕೆಯನ್ನು ಖಂಡಿಸಿದ ಪಾಕಿಸ್ತಾನ

Terrorist
Published on

ನವದೆಹಲಿ: ದೇಶದಲ್ಲಿ ಭಯೋತ್ಪಾದಕ ಚಟುವಟಿಗಳನ್ನು ನಡೆಸಲು ಪ್ರಯತ್ನಿಸಿದ ಬಳಿಕ ಗಡಿ ದಾಟಿ ಓಡಿ ಹೋಗುವ ಉಗ್ರರನ್ನು ಸೆದೆಬಡಿಯಲು ಭಾರತ, ಪಾಕಿಸ್ತಾನದ ಒಳಗೆ ನುಗ್ಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹೇಳಿಕೆಯನ್ನು ಪಾಕ್​ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ರಾಜ್​ನಾಥ್​ ಸಿಂಗ್​ ಅವರ ಹೇಳಿಕೆಯನ್ನು ಪ್ರಚೋದನಕಾರಿ ಮತ್ತು ಮಯೋಪಿಕ್​ ಎಂದು ಕರೆದಿದೆ.

ಪ್ರಕಟಣೆಯಲ್ಲಿ ಏನಿದೆ?

ರಾಜ್​ನಾಥ್​ ಸಿಂಗ್​​ ಅವರ ಹೇಳಿಕೆಯು ಪ್ರಚೋದನಕಾರಿಯಾಗಿದೆ. ಪಾಕಿಸ್ತಾನ ಯಾವಾಗಲೂ ಶಾಂತಿಗಾಗಿ ತನ್ನ ಬದ್ಧತೆಯನ್ನು ತೋರಿಸಿದೆ. ಪಾಕಿಸ್ತಾನ ತನ್ನದೇ ಆದ ಭದ್ರತೆಗೆ ಸಮರ್ಥವಾಗಿದೆ ಮತ್ತು ನಾವು ಇದನ್ನು ಇತಿಹಾಸದಲ್ಲಿ ಮತ್ತೆ ಮತ್ತೆ ಸಾಬೀತುಪಡಿಸಿದ್ದೇವೆ ಎಂದು ಪಾಕಿಸ್ತಾನ ಸರ್ಕಾರದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.

ವಿದೇಶಿ ನೆಲದಲ್ಲಿ ವಾಸಿಸುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಯೋಜನೆಯ ಭಾಗವಾಗಿ 2020 ರಿಂದ ಪಾಕಿಸ್ತಾನದಲ್ಲಿ ಭಾರತ ಸರ್ಕಾರ 20 ಉಗ್ರರನ್ನು ಕೊಂದಿದೆ ಎಂದು ಬ್ರಿಟನ್‌ನ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ರಾಜನಾಥ್​ ಸಿಂಗ್​ ಅವರು ಈ ಹೇಳಿಕೆಯನ್ನು ನೀಡಿದ್ದರು.

ಭಾರತವು ಸದಾ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತದೆ. ಆದರೆ, ಯಾರಾದರೂ ಭಾರತದ ಮೇಲೆ ಕೋಪದ ಕಣ್ಣುಗಳನ್ನು ಬೀರಿದರೆ, ಭಾರತಕ್ಕೆ ಬಂದು ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದರೆ, ನಾವು ಅವರನ್ನು ಬಿಡುವುದಿಲ್ಲ ಎಂದು ರಾಜನಾಥ್​ ಸಿಂಗ್​ ಎಚ್ಚರಿಕೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net