ಜಿಲ್ಲೆ

ಎಲ್ಲರೂ ಸೇರಿ ಪ್ರಜ್ವಲ್​ನನ್ನು ಹುತಾತ್ಮನಾಗಿ ಮಾಡಲು ಹೊರಟ್ಟಿದ್ದಾರೆ: ವಾಟಾಳ್​ ನಾಗರಾಜ್

ಹಾಸನ: ಹಾಸನ ಸಂಸದ ಪ್ರಜ್ವಲ್​ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ರಾಜಕೀಯ ಕೆಸರೆರಚಾಟ ತಾರ್ಕಿಕ ಅಂತ್ಯ ಕಾಣುವುದು ದೂರದ ಮಾತಾಗಿದೆ. ಇನ್ನೂ ಈ ಕುರಿತು ಮಾತನಾಡಿರುವ ವಾಟಾಳ್​ ನಾಗರಾಜ್​ ಎಲ್ಲರೂ ಸೇರಿ ಪ್ರಜ್ವಲ್​ನನ್ನು ಹುತಾತ್ಮನಾಗಿ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಾಟಾಳ್​ ನಾಗರಾಜ್​, ಹಾಸನದ ಪ್ರೆಸ್​​ ಕ್ಲಬ್​ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದರು. ಈ ವೇಳೆ ಹಲವು ವಿಚಾರಗಳನ್ನು ಹಲವು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಮೊದಲಿಗೆ ಪ್ರಜ್ವಲ್​ ರೇವಣ್ಣ ಕುರಿತಾಗಿ ಕೇಳಿದಾಗ ಮಾತನಾಡಲು ನಿರಾಕರಿಸಿದ ವಾಟಾಳ್​, ಆ ಪ್ರಕರಣದ ಬಗ್ಗೆ ಮಾತಾಡುವುದೇ ಬೇಡ, ಅದು ಒಂದು ಕಡೆಯಿಂದ ಶುರುವಾಗಿ ಮತ್ಯಾವುದೋ ಕಡೆಗೆ ಹೋಗುತ್ತದೆ. ಒಂದು ಪದ ಹೇಳಿದಾಗ ಅದಕ್ಕೆ ಮತ್ತೊಂದು ಸೇರಿಕೊಳ್ಳುತ್ತದೆ, ಎಲ್ಲ ಸೇರಿ ಪ್ರಜ್ವಲ್​ನನ್ನು ಹುತಾತ್ಮ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯಲ್ಲಿ ತಮ್ಮ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರದು. ಆದರೆ, ಸಂತ್ರಸ್ತ ಮಹಿಳೆಯರ ಬಗ್ಗೆ ನಾವೆಲ್ಲ ಯೋಚನೆ ಮಾಡಬೇಕಿದೆ, ಸರ್ಕಾರ ಅವರ ನೆರವಿಗೆ ಧಾವಿಸಿ ಅವರು ಅನುಭವಿಸುತ್ತಿರುವ ಮಾನಸಿಕ ತೊಳಲಾಟ ಮತ್ತು ಹಿಂಸೆಯಿಂದ ಮುಕ್ತರಾಗಿಸಬೇಕಿದೆ, ಚುನಾವಣೆಯ ಬಳಿಕ ತಾನು ರಾಜ್ಯದಾದ್ಯಂತ ಓಡಾಡಿ ಶೋಷಿತ ಮಹಿಳೆಯಯರ ಪರವಾಗಿ ಧ್ವನಿಯೆತ್ತುವುದಾಗಿ ವಾಟಾಳ್​ ನಾಗರಾಜ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.