ಮೂಡುಬಿದಿರೆ: ಪರಿಸರ ಸಂರಕ್ಷಣೆಯತ್ತ ವಿದ್ಯಾರ್ಥಿಗಳ ಮನೋಭಾವ, ಸಾಮಾಜಿಕ ಜಾಗೃತಿ ಮೂಡಿಸುವ ನೆಲೆಯಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಸಸ್ಯ ಶ್ಯಾಮಲಾ ಎಂಬ ಶೀರ್ಷಿಕೆಯಡಿ ಮೂಡುಬಿದಿರೆ ಸುತ್ತಮುತ್ತ ಪರಿಸರದಲ್ಲಿ 1,000 ಗಿಡಗಳನ್ನು ನೆಟ್ಟು ಸಂರಕ್ಷಿಸುವ ಕಾರ್ಯಕ್ರಮ ಪ್ರತಿವರ್ಷ ಹಮ್ಮಿಕೊಳ್ಳುತ್ತಿದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ಜವಾಹರಲಾಲ್ ನೆಹರು ಪ್ರೌಢಶಾಲೆ ಶಿರ್ತಾಡಿ, ಜೀವ ನಿಧಿ ಸೇವಾ ಬಳಗ ಆರ್.ಸಿ.ಸಿ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಆಶ್ರಯದಲ್ಲಿ ನಡೆದ ಸಸ್ಯ ಶ್ಯಾಮಲಾ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿರ್ತಾಡಿ ಗ್ರಾಪಂ ಅಧ್ಯಕ್ಷೆ ಆಗ್ನೆಸ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ಶಾಲಾ ಆಡಳಿತ ಮಂಡಳಿ ಸದಸ್ಯ ಜನಾರ್ದನ ಸೇರಿಗಾರ್, ಜೀವ ನಿಧಿ ಸೇವಾ ಬಳಗ, ಆರ್.ಸಿ.ಸಿ ಅಧ್ಯಕ್ಷ ಶಶಿಧರ್ ದೇವಾಡಿಗ ಗೆಂದೊಟ್ಟು, ರಾಷ್ಟ್ರ ಸೇವಿಕಾ ಸಮಿತಿ ಅಧ್ಯಕ್ಷೆ ಮೂಕಾಂಬಿಕಾ ಭಟ್ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಸಾವಿತ್ರಿ ಸ್ವಾಗತಿಸಿದರು. ಎಕ್ಸಲೆಂಟ್ ಸಂಸ್ಥೆ ಎನ್‌ಎಸ್‌ಎಸ್ ಅಧಿಕಾರಿ ತೇಜಸ್ವಿ ಭಟ್ ಪ್ರಾಸ್ತಾವನೆಗೈದರು. ಸಹಶಿಕ್ಷಕಿ ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಾಲತಿ ವಂದಿಸಿದರು.