ಬೆಂಗಳೂರು: ಪ್ರೇಮ ವಿವಾಹವಾಗಲು ಪಾಲಕರು ಒಪ್ಪಿಗೆ ನೀಡದಿದ್ದಕ್ಕೆ ಮನನೊಂದ ಯುವತಿಯೊಬ್ಬಳು ವ್ಯಾಲೆಂಟೈನ್ಸ್ ಡೇಗೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲ್ಲೂಕು ಹುಣಸೆಗಟ್ಟದಪಾಳ್ಯದಲ್ಲಿ ನಡೆದಿದೆ.
ಶಶಿಕಲಾ (23) ಮೃತ ಯುವತಿ. ನೆಲಮಂಗಲ ತಾಲೂಕಿನ ಹುಣಸೆಘಟ್ಟಪಾಳ್ಯದ ನಿವಾಸಿ. ಇತ್ತೀಚೆಗಷ್ಟೇ ಆಕೆಯ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದಿತ್ತು. ಆದರೆ, ಪಾಲಕರು ಮಗಳ ಪ್ರೀತಿ ನೋ ಎಂದಿದ್ದರು. ಇದರಿಂದ ಮನನೊಂದು ಶಶಿಕಲಾ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಳೆಂದು ಹೇಳಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರ್ಪಡೆಗೊಂಡಿದ್ದ ಶಶಿಕಲಾಗೆ ಕಳೆದ ಕೆಲ ದಿನಗಳಿಂದ ಬೆಂಗಳೂರು ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ತನ್ನ ಸ್ನೇಹಿತೆಯ ಮದುವೆಗೆಂದು ಇತ್ತೀಚೆಗೆ ತನ್ನ ಪ್ರಿಯಕರನೊಂದಿಗೆ ಮೂರು ದಿನಗಳ ಕಾಲ ಮೈಸೂರಿಗೆ ಹೋಗಿದ್ದಳಂತೆ. ಅಲ್ಲದೆ ನಾಳಿನ ಪ್ರೇಮಿಗಳ ದಿನಾಚರಣೆಗೆ ಡೇಟಿಂಗ್ ಪ್ಲಾನ್ ಸಹ ಮಾಡಿಕೊಂಡಿದ್ದಳಂತೆ. ಆದರೆ, ಈ ಎಲ್ಲಾ ವಿಚಾರಗಳು ಮನೆಯವರಿಗೆ ಗೊತ್ತಾದ ಮೇಲೆ, ಆಕೆಗೆ ಬೈದು ಬುದ್ದಿ ಹೇಳಿದ್ದರು.
ಪಾಲಕರ ಮಾತನ್ನೇ ಗಂಭೀರವಾಗಿ ತೆಗೆದುಕೊಂಡ ಶಶಿಕಲಾ ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಲ್ಲದೇ ಆತ್ಮಹತ್ಯೆಗೂ ಮುನ್ನಾ ಲವ್ ಎಂದು ಬರೆದಿರುವ ಟೀ ಶರ್ಟ್ ಧರಿಸಿಕೊಂಡು ನೇಣಿಗೆ ಕೊರಳೊಡ್ಡಿದ್ದಾಳೆ. (ದಿಗ್ವಿಜಯ ನ್ಯೂಸ್)