ಜಿಲ್ಲೆ

ಸೋಮವಾರದಿಂದ ಇಂದ್ರಧನುಷ್‌ ಲಸಿಕಾ ಅಭಿಯಾನ

Uttara Kannada - Subash Hegde

ಕಾರವಾರ: ಜಿಲ್ಲೆಯಲ್ಲಿ ಅ.9 ರಿಂದ 14 ರವರೆಗೆ ಆಯೋಜಿಸಿರುವ ಮೂರನೇ ಸುತ್ತಿನ ಮಿಷನ್ ಇಂದ್ರಧನುಷ್ 5 ಲಸಿಕಾ ಅಭಿಯಾನವನ್ನು ಶೇ. 100 ರಷ್ಟು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಲಸಿಕೆ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದ್ರಧನುಷ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಲಸಿಕಾ ವೇಳಾ ಪಟ್ಟಿಯನ್ವಯ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ನಿಗದಿತ ಅವಧಿಯಲ್ಲಿ ನೀಡಬೇಕಾದ ಎಲ್ಲ ಲಸಿಕೆಗಳನ್ನು ತಪ್ಪದೇ ನೀಡುವಂತೆ ಸೂಚಿಸಿದರು.
ರುಬೆಲ್ಲಾ ಲಸಿಕೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ. ಜೊಯಿಡಾ, ಯಲ್ಲಾಪುರ, ಶಿರಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುವಂತೆ ಅರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯವರು ಜಂಟಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ:ಜನರ ಸಮಸ್ಯೆ ಆಲಿಸಿ ವರದಿ ತಯಾರಿಸಿ
ಮಿಷನ್ ಇಂದ್ರ ಧನುಷ್ ಕಾರ್ಯಕ್ರಮದ ಮೂಲಕ ದಡಾರ ರೂಬೆಲ್ಲಾ ರೋಗದಿಂದ ಮಕ್ಕಳಿಗೆ ಹಾನಿಯಾಗುವುದನ್ನು ತಪ್ಪಿಸಲು ಮತ್ತು ಸಾರ್ವತ್ರಿಕ ಲಸಿಕೆಯಲ್ಲಿ ಇತ್ತೀಚೆಗೆ ಸೇರ್ಪಡೆಗೊಂಡ ಪಿವಿಸಿ ಲಸಿಕೆ, ಡಿಪಿಟಿ ಬೂಸ್ಟರ್ ಡೋಸ್, ಒಪಿವಿ ಬೂಸ್ಟರ್ ಡೋಸ್ ಸೇರಿದಂತೆ ಮಾರಕ ರೋಗಗಳಿಂದ ಮಕ್ಕಳು ಮತ್ತು ಗರ್ಭಿಣಿಯರನ್ನು ರಕ್ಷಿಸಲು ಉದ್ದೇಶಿಸಿದ್ದು, ಸಾರ್ವಜನಿಕರು ತಮ್ಮ ಮಕ್ಕಳಿಗೆ ಈ ಅಗತ್ಯ ಲಸಿಕೆಗಳನ್ನು ತಪ್ಪದೇ ಕೊಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಶಾಸಕ ಸತೀಶ್ ಸೈಲ್ ಮಾತನಾಡಿ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದವರ ಅಂಕಿ ಅಂಶ ಪಡೆದುಕೊಳ್ಳಿ. ಹಾಗೆಯೇ ಶಾಲೆ ಕಾಲೇಜುಗಳಲ್ಲಿ ಮಕ್ಕಳು ಲಸಿಕೆಯನ್ನು ಪಡೆದಕೊಂಡಿರುವ ಬಗ್ಗೆ ಪೋಷಕರ ಗಮನಕ್ಕೆ ತರಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ವಿ. ನೀರಜ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹರ್ಷ ಇದ್ದರು.