More

    ಜನರ ಸಮಸ್ಯೆ ಆಲಿಸಿ ವರದಿ ತಯಾರಿಸಿ

    ಅಂಕೋಲಾ: ಅಧಿಕಾರಿಗಳು ಕಾರ್ಯಾಲಯ ಬಿಟ್ಟು ಸ್ವತಃ ಫೀಲ್ಡಿಗಿಳಿದು ಅಲ್ಲಿನ ಸಮಸ್ಯೆಗಳನ್ನು ಅರಿತು ವರದಿ ಮಾಡಬೇಕು ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಕೆ. ಸೈಲ್ ಹೇಳಿದರು.
    ತಾಪಂ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಕಾರ್ಯಾಲಯದಲ್ಲಿ ಕುಳಿತು ವರದಿ ತಯಾರಿಸದೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಅಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ತಿಳಿದುಕೊಂಡು ನಂತರ ವರದಿ ತಯಾರಿಸಬೇಕು ಎಂದು ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಮಂಡಿಸಿದ ಶಿಕ್ಷಣ ಇಲಾಖೆಯ ಪ್ರಗತಿ ವರದಿಗೆ ಪ್ರತಿಕ್ರಿಯಿಸಿದ ಶಾಸಕರು, ತಾಲೂಕಿ ನಲ್ಲಿ ಕೆಲವು ಹಳೆಯ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಾಗ ಸ್ವತಃ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಬೇಕು. ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ತಿಗೆ ಅಥವಾ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು. ಶಾಲಾ ಕಟ್ಟಡ ಮತ್ತು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮೊದಲ ಆದ್ಯತೆಯಲ್ಲಿ ಅನುದಾನ ಒದಗಿಸುತ್ತೇನೆ ಎಂದರು.
    ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸಂತೋಷಕುಮಾರ, ಡಯಾಲಿಸಿಸ್ ನಿರ್ವಹಣೆ ವಹಿಸಿದ್ದ ಸಂಜೀವಿನಿ ಏಜೆನ್ಸಿಯವರು ಈಗ ನಿರ್ವಹಿಸುತ್ತಿಲ್ಲ. ಹೀಗಾಗಿ, ಆಸ್ಪತ್ರೆಯಿಂದಲೇ ನಿರ್ವಹಿಸಲಾಗುತ್ತಿದೆ. ಒಂದು ಯಂತ್ರ ಕೆಟ್ಟಿದೆ. ಸ್ತ್ರೀರೋಗ ತಜ್ಞರು, ಎಕ್ಸರೇ ಮತ್ತು ಲ್ಯಾಬ್ ಟೆಕ್ನಿಷಿಯನ್ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರೋಗಿಗಳನ್ನು ಬೇರೆಡೆ ತೆರಳುವಂತೆ ಶಿಫಾರಸು ಮಾಡುವುದು ಅನಿವಾರ್ಯವಾಗಿದೆ ಎಂದರು.
    ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಮೀನುಗಾರರಿಗೆ ಮನೆ ಮಂಜೂರಾಗಿದ್ದರೂ ಸಂಬಂಧಪಟ್ಟ ಗ್ರಾಪಂನಿಂದ ಕಟ್ಟಡ ಪರವಾನಿಗೆ ವಿಳಂಬವಾಗುತ್ತಿದೆ ಎಂದರು. ಮಧ್ಯೆ ಪ್ರವೇಶಿಸಿದ ಶಾಸಕರು ಮೀನುಗಾರರಿಗೆ ಮನೆ ಕಟ್ಟಲು ಸಿಆರ್‌ಜಡ್ ಅನ್ವಯವಾಗುವುದಿಲ್ಲ. ಅದನ್ನು ನೆಪ ಮಾಡದೆ ಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರ ಹಾಗೂ ಕಟ್ಟಡ ಪರವಾನಗಿಯನ್ನು ಸಂಬಂಧಪಟ್ಟ ಪಿಡಿಒಗಳು ನೀಡಬೇಕು. ಇನ್ನು 50 ಮನೆಗಳಿಗೆ ಬೇಡಿಕೆಯ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.
    ತಹಸೀಲ್ದಾರ್ ಅಶೋಕ ಭಟ್, ತಾಪಂ ಆಡಳಿತಾಧಿಕಾರಿ ನಾಗೇಶ ರಾಯ್ಕರ, ತಾಪಂ ಇಒ ಸುನೀಲ ಎಂ., ಶ್ರೀಧರ ನಾಯ್ಕ, ವಿ.ಟಿ.ನಾಯಕ, ಮನೋಹರ ಅರ್ಗೇಕರ್, ರಾಮು ಗುನಗಿ, ಸಂಜೀವ ನಾಯಕ, ಪ್ರವೀಣ ನಾಯ್ಕ, ಮಹಮ್ಮದ ಇಸಾಕ್ ಸೈಯದ್, ಬಾಲಚಂದ್ರ, ಸಂತೋಷ ಶೆಟ್ಟಿ, ಉದ್ದಪ್ಪ ಧರೆಪ್ಪನವರ, ಜಿ.ವಿ. ನಾಯಕ, ವಿ.ಪಿ. ನಾಯ್ಕ, ಸವಿತಾ ಶಾಸ್ತ್ರೀಮಠ, ಗಿರೀಶ ನಾಯಕ, ನಾಗೇಂದ್ರ ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts