More

    ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮುಂದುವರಿಯಲಿ-ಶಶಿಭೂಷಣ ಹೆಗಡೆ

    ಕಾರವಾರ: ಕೃಷಿ ಹವ್ಯಕರ ಮೂಲ ಬೇರು. ಅದನ್ನು ಘಟ್ಟಿಗೊಳಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ದೊಡ್ಮನೆ ಹೇಳಿದರು.
    ಅಂಕೋಲಾ ತಾಲೂಕು ಹವ್ಯಕ ಸಂಘಟಿತ ಸಾಂಸ್ಕೃತಿಕ ಸಂಘದಿಂದ ಶನಿವಾರ ತಾಲೂಕಿನ ಸುಂಕಸಾಳ ಕಟ್ಟಿನ ಹಕ್ಕಲ‌ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಸಮಾರಂಭ ಸಮಾರಂಭ ಉದ್ಗಾಟಿಸಿ‌ ಅವರು ಮಾತನಾಡಿದರು.
    ಕೃಷಿಯ ನೆಲೆಯಿಂದಲೇ ನಮ್ಮ ಸಂಸ್ಕೃತಿ, ಹಬ್ಬ, ಹರಿದಿನಗಳು, ಆಚರಣೆಗಳು, ದಿನನಿತ್ಯದ ಜೀವನದ ವಿಶೇಷತೆಗಳು. ಅದರಿಂದಲೇ ಬಂದಿವೆ. ಹಾಗಾಗಿ ನಮ್ಮ ಸಂಸ್ಕೃತಿಯ ಹಿಂದಿರುವ ನೆಲೆಗಟ್ಟನ್ನು ಭದ್ರವಾಗಿಸುವ ಬಗ್ಗೆ ಗಂಭೀರವಾಗಿ ವಿಚಾರ ಮಾಡಬೇಕಿದೆ. ಕೋವಿಡ್‌ ಕಾಲಘಟ್ಟದಲ್ಲಿ ವರ್ಕ್‌ ಫ್ರಂ ಹೋಂ ಸಂಸ್ಕೃತಿ ಆರಂಭವಾಯಿತು. ಈಗಲೂ ನಿಮ್ಮ ಕಂಪನಿಯವರನ್ನು ಒಪ್ಪಿಸಿ ಅದೇ ಸಂಸ್ಕೃತಿ ಮುಂದುವರಿಸಿ. ಕೃಷಿಯ ಜತೆಗೆ ಉದ್ಯೋಗವೂ ಮುಂದುವರಿಯುತ್ತದೆ ಎಂದು ಸಲಹೆ ನೀಡಿದರು.
    ರಾಮಚಂದ್ರಾಪುರ ಮಠದ ಹವ್ಯಕ ಮಹಾ ಮಂಡಲದ ಮೋಹನ ಹೆಗಡೆ ಅತಿಥಿಯಾಗಿ ಮಾತನಾಡಿ, ಸ್ವಾಭಿಮಾನದ ಬದುಕಿಗೆ ಮಾದರಿ‌ಯಾದವರು ಹವ್ಯಕರು.‌ ಆದರೆ, ಸಂಕೋಚದ ಸ್ವಭಾವ ನಮ್ಮನ್ನು ಹಿಂದಿಟ್ಟುಬಿಡುತ್ತದೆ. ನಮ್ಮ ಹಲವು ಅರ್ಹರಿಗೆ ಪ್ರಶಸ್ತಿಗಳು ಸಿಗುತ್ತಿಲ್ಲ. ಹವ್ಯಕರ ಪ್ರತಿಭೆಗಳಿಗೆ ಎಲ್ಲೆಡೆ ಬೆಲೆ ಇದೆ. ಅದನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು. ಆಚಾರ, ಅನುಷ್ಠಾನ,‌ಅನುಸಂಧಾನ ಹವ್ಯಕರ ವಿಶೇಷ. ನಮ್ಮ ಸಂಸ್ಕಾರಗಳು ಗೊಡ್ಡು ಸಂಪ್ರದಾಯವಲ್ಲ ಎಂದು ಸಾರಿ‌ ಹೇಳಬೇಕಿದೆ. ನಮ್ಮ ಸಂಸ್ಕೃತಿಯನ್ನು ವಿಶ್ವ ವಿದ್ಯಾಲಯಗಳು ಅಧ್ಯಯನ ಮಾಡಬೇಕು ಎಂದರು. ಪಿತೃಗಳನ್ನು ನೋಡಿಕೊಳ್ಳಲು ಮರೆಯಬೇಡಿ, ಪಿತೃ ಕಾರ್ಯಗಳನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
    ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್‌.ಹೆಗಡೆ ಬೊಮ್ಮನಹಳ್ಳಿ, ವಿಶ್ವದ ಅತಿ ಸುಸಂಸ್ಕೃತ ಸಮಾಜದಲ್ಲಿ ಹವ್ಯಕ ಎಂದು ವಿಶ್ವದ ಸಂಸ್ಥೆಯೊಂದು ಅಧ್ಯಯನ ಮಾಡಿ ಹೇಳಿದೆ. ಆದರೆ, ಹವ್ಯಕ ಸಮಾಜ ದಿನದಿನಕ್ಕೆ ಸಣ್ಣದಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಜಗತ್ತಿನ ಎಲ್ಲರಿಗೂ ನಮ್ಮ ಆಚಾರ, ವಿಚಾರ ಮಾದರಿಯಾಗಬೇಕು ಎಂದು ಹಾರೈಸಿದರು. ಹವ್ಯಕ ಮಹಾ ಸಭಾದ ಕಾರ್ಯದರ್ಶಿ ಪ್ರಶಾಂತ ಭಟ್ ಮಲವಳ್ಳಿ,ತಾಯಿ ತಂದೆಯನ್ನು ಗೌರವಿಸುವವರು ಸಮಾಜದಲ್ಲೂ ಯಶಸ್ವಿಯಾಗಿರುತ್ತಾರೆ ಎಂದರು. ಅಧ್ಯಕ್ಷತೆ ವಹಿಸಿದ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ ಕೆಕ್ಕಾರ, ಮಯೂರ ವರ್ಮ ಅಹಿಚ್ಛತ್ರದಿಂದ 32 ಕುಟುಂಬದವರನ್ನು ಕರೆತಂದ. ಐಎಎಸ್ ಮುಂತಾದ ಆಡಳಿತಾತ್ಮಕ ಸೇವೆಯಲ್ಲಿ ಹವ್ಯಕರು ಹಿಂದಿದ್ದಾರೆ. ಆ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಒಟ್ಟಿನಲ್ಲಿ ಹವ್ಯಕ ಸಮಾಜ ಅತಿ ಮುಂದುವರಿದ ಸಮಾಜ ಎಂಬಂತಾಗಲು ಮಹಾ ಸಭಾ ಎಲ್ಲ ಕಾರ್ಯ ಮಾಡುತ್ತಿದೆ ಎಂದರು. ಹವ್ಯಾಸಿ ಬರಹಗಾರ್ತಿ ಪ್ರಿಯಾ ಎಂ.ಭಟ್ಟ ಕಲ್ಲಬ್ಬೆ, ನಮ್ಮ ಸುತ್ತಲಿನ ಪರಿಸರ ನಮ್ಮ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.

    ರಾಘವೇಂದ್ರ ಭಟ್ಟ ಸುಂಕಸಾಳ ಸ್ವಾಗತಿಸಿದರು. ಸಂಘದ
    ಅಧ್ಯಕ್ಷ ಎಂ.ಪಿ. ಭಟ್ಟ ಪ್ರಸ್ಥಾವಿಕ ಮಾತನ್ನಾಡಿದರು.
    ವಿಶ್ವನಾಥ ಸುಂಕಸಾಳ ನಿರೂಪಿಸದರು.ವಿ.ಬಿ.ಭಟ್ಟ ವಂದಿಸಿದರು.


    ಪ್ರತಿಭಾ ಪುರಸ್ಕಾರ

    Ankola-havyaka
    ಎಸ್‌ಎಸ್‌ಎಲ್‌ಸಿ, ಪಿಯುಸಿ, ಹಾಗೂ ವಿವಿಧ ಪದವಿಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಪಿಎಚ್‌ಡಿ ಮಾಡಿದ, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಹಾಗೂ ಅವರ ಪಾಲರಕರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು. ಅಲ್ಲದೆ, ತೇಜಸ್ವಿ ರಾಮಕೃಷ್ಣ ಗಾಂವಕರ್, ಪ್ರಚೇತ ಭಟ್ ಸುಂಕಸಾಳ ಎಂಬ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹವ್ಯಕ ಕಣ್ಮಣಿ, ಡಾ.ಅಶೋಕ ಕುಮಾರ ಎ. ಅವರಿಗೆ ಗಣಿತ ಸೌರಭ, ಯಕ್ಷಗಾನ ಮೇಳ ಕಟ್ಟಿ ಸಾಧನೆ ಮಾಡಿದ ಶತಾಯುಷಿ ವಿಶ್ವೇಶ್ವರ ಹೆಗಡೆ ಹಳವಳ್ಳಿ ಅವರಿಗೆ ಯಕ್ಷ ಸೌರಭ, ಗೋವಿಂದ ಗಣಪಯ್ಯ ಹೆಗಡೆ ಕರಿಕಲ್ ಅವರಿಗೆ ಕೃಷಿ ಸೌರಭ, ಶಿವರಾಮ ಭಾಗವತ ಅವರಿಗೆ ಸಂಗೀತ ಸೌರಭ, ಡಾ.ವಿಶ್ವನಾಥ ಸುಂಕಸಾಳ ಅವರಿಗೆ ಶಿಕ್ಷಣ ಸೌರಭ, ಸಿಂಧು ವೈದ್ಯ ಅವರಿಗೆ ನಾಟ್ಯ ಸೌರಭ, ಕೃಷಿಕ ವರರನ್ನು ವರಿಸಿದ ಸ್ವಾತಿ ಗಜಾನನ ಭಟ್, ರಮ್ಯಾ ಶಶಾಂಕ ಹೆಗಡೆ ಅವರಿಗೆ ಹವ್ಯಕ ಪಾರಿಜಾತೆ, ರಾಮಚಂದ್ರ ಗೋವಿಂದ ಭಟ್ ಕೋಟೆಮನೆ ಅವರಿಗೆ ಪುರೋಹಿತ ಪಾರಂಗತ, 29 ಸದಸ್ಯರಿರುವ ಶಿವರಾಮ ಗೋವಿಂದ ಭಟ್ ಕುಂಟಗಣಿ ಕುಟುಂಬಕ್ಕೆ, ಆದರ್ಶ ಕುಟುಂಬ, ಸಂಘದ ಉಪಾಧ್ಯಕ್ಷ ವಿ.ಎನ್.ಭಟ್ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಂ.ಎನ್.ಹೆಗಡೆ ಹಬ್ಬಣಮನೆ ಅವರಿಗೆ ಹವ್ಯಕ ಅಗ್ರಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂ.ಎನ್‌.ಹೆಗಡೆ, ಸಮಾಜದಿಂದ ಸಹಕಾರ ಪಡೆದವರು ಅದನ್ನು ನೆನಪಿಟ್ಟುಕೊಂಡು ಮತ್ತೆ ಸಮಾಜಕ್ಕೆ ವಾಪಸ್‌ ಕೊಡುವ ಕೆಲಸ ಮಾಡಬೇಕು ಎಂದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗಣ ಹವನ, ಸತ್ಯನಾರಾಯಣ ಪೂಜೆಗಳು ಜರುಗಿದವು. ಮಧ್ಯಾಹ್ನದ ನಂತರ ನೃತ್ಯ, ಸಂಗೀತ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾಯಕ್ರಮಗಳು ಗಮನ ಸೆಳೆದವು.

    ಇದನ್ನೂ ಓದಿ: ಹವ್ಯಕ ಪ್ರತಿಭೆ ತಿಳಿಸುವ ʼಪ್ರತಿಬಿಂಬʼ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts