ಶಿರಸಿ ಹಾವೇರಿ ರಸ್ತೆ (Highway) ದುರವಸ್ಥೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರೊಂದಿಗೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ಎಂ. ಮಾತನಾಡಿದರು.
- ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
- ಯೋಜನಾ ನಿರ್ದೇಶಕ ಶಿವಕುಮಾರ ಎಂ. ಭರವಸೆ
- ಸ್ಥಳೀಯರೊಂದಿಗೆ ಸಭೆ
ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ಎಂ. ಸ್ಥಳೀಯರಿಗೆ ಭರವಸೆ ನೀಡಿದರು.
ಶಿರಸಿ-ಹಾವೇರಿ ರಸ್ತೆಯ ಅವ್ಯವಸ್ಥೆಯ ಕುರಿತು ಸಾರ್ವಜನಿಕರು ಪ್ರತಿಭಟಿಸಿದ ಹಿನ್ನೆಲೆ ಗುರುವಾರ ಸ್ಥಳಕ್ಕಾಗಮಿಸಿ, ಸಾರ್ವಜನಿಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಸಂಚಾರಕ್ಕೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಬಿಸಲಕೊಪ್ಪದಲ್ಲಿ ಸಹಸ್ರಾರು ಜನ ಸೇರಿ ಪ್ರತಿಭಟನೆ ನಡೆಸಿದ್ದರಲ್ಲದೇ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಸ್ಥಳಕ್ಕೆ ಬರಬೇಕು, ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಆದರೆ, ಶಿವಕುಮಾರ ಎಂ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರಣ ಪ್ರತಿಭಟನಾ ಸ್ಥಳಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗುರುವಾರ ಬಿಸಲಕೊಒಪ್ಪಕ್ಕೇ ಆಗಮಿಸಿ ಸ್ಥಳೀಯರೊಂದಿಗೆ ಸಭೆ ನಡೆಸುವ ಭರವಸೆ ನೀಡಿದ್ದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು.
ಈ ಹಿನ್ನೆಲೆಯಲ್ಲಿ ಆಗಮಿಸಿದ್ದ ಶಿವಕುಮಾರ, ಗುರುವಾರವೂ ಸ್ಥಳೀಯ ಜನತೆಯ ಆಕ್ಷೇಪಣೆ ಎದುರಿಸಬೇಕಾಗಿ ಬಂತು.
ಈ ವೇಳೆ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ ನಾಯ್ಕ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರ ಜೀವನವೇ ದುಸ್ತರವಾಗಿದೆ.
ರಸ್ತೆ ಸಂಪೂರ್ಣ ಹದಗೆಟ್ಟು ಧೂಳುಮಯ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸವಾರರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಶಿರಸಿಯ ಅಗಸೆಬಾಗಿಲಿನಿಂದ ಹಾವೇರಿ ಸಂಪರ್ಕಿಸುವ ಸುಮಾರು 72 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಗರದಂಚಿನ ಚಿಪಗಿ ನಾಕಾದಿಂದ ಹಾವೇರಿ ಜಿಲ್ಲೆಯ ನಾಲ್ಕರಕ್ರಾಸ್ ವರೆಗೆ ಸುಮಾರು 38 ಕಿ.ಮೀ ವ್ಯಾಪ್ತಿಯಲ್ಲಿ ಕೆಲ ಭಾಗದಲ್ಲಿ ರಸ್ತೆಯನ್ನು ಅಗೆದು ಅರೆಬರೆ ಕಾಮಗಾರಿ ನಡೆಸಿ, ಅವ್ಯವಸ್ಥೆಯ ಆಗರವನ್ನಾಗಿ ಮಾಡಲಾಗಿದೆ’ ಎಂದು ಆರೋಪಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಶಿವಕುಮಾರ.ಎಂ ಮಾತನಾಡಿ, ರಸ್ತೆ ಕಾಮಗಾರಿಯ ಪ್ರಗತಿಯ ಕುರಿತು ವಾರಕ್ಕೊಮ್ಮೆ ಸಭೆ ಮಾಡಲಾಗುತ್ತದೆ.
15 ದಿನದೊಳಗಡೆ ಕೆಲಸ ಮಾಡಿದ್ದರೆ ಬೇರೆ ಕಂಪೆನಿಗೆ ಗುತ್ತಿಗೆ ನೀಡಲಾಗುತ್ತದೆ.
ಗುಣಮಟ್ಟದಲ್ಲಿ ಎಂದಿಗೂ ನಾವು ರಾಜಿ ಆಗುವುದಿಲ್ಲ. ಇಲ್ಲಿಯವರೆಗೆ ನಿರ್ವಹಿಸಿರುವ ಕಾಮಗಾರಿಯ ಗುಣಮಟ್ಟದ ಪರೀಕ್ಷೆ ನಡೆಸಬೇಕು. ಮಳೆಗಾಲದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಅಗೆದ 8 ಕಿ.ಮೀ ಮಳೆಗಾಲದ ಒಳಗಡೆ ಕಾಮಗಾರಿ ಮುಕ್ತಾಯಗೊಳಿಸಲು ಗುತ್ತಿಗೆ ಕಂಪೆನಿಗೆ ಸೂಚನೆ ನೀಡಲಾಗುತ್ತದೆ. ಬುಗಡಿಕೊಪ್ಪದಲ್ಲಿ 2.5 ಕಿ.ಮೀ ಡಾಂಬರೀಕರಣ ಮಾಡಲಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಲ್ಲಿ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 174 ಕೋಟಿ ರೂ. ಮಂಜೂರು ಆಗಿದ್ದು, ಈಗಾಗಲೇ ಗುತ್ತಿಗೆದಾರನಿಗೆ 33 ಕೋಟಿ ರೂ. ಪಾವತಿ ಮಾಡಲಾಗಿದೆ.
ಗುತ್ತಿಗೆದಾರನಿಗೆ ಹಣ ಪಾವತಿಯಾಗಿಲ್ಲ ಎಂಬುದು ಸುಳ್ಳು ವದಂತಿ. ಕೆಲಸ ನಿರ್ವಹಸಿದ ಹಣವನ್ನು ಪಾವತಿ ಮಾಡಲಾಗಿದೆ.
ಇಂಜಿನಿಯರ್ ಸ್ಥಳದಲ್ಲಿದ್ದು, ರಸ್ತೆಯ ಪ್ರತಿಯ ವರದಿಯನ್ನು ಸಲ್ಲಿಕೆ ಮಾಡಲಿದ್ದಾರೆ. ಅಗೆದ ರಸ್ತೆಯನ್ನು ಪೂರ್ಣಗೊಳಿಸುವುದು ನಮ್ಮ ಜವಾಬ್ದಾರಿ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ರಮೇಶ ನಾಯ್ಕ ಕುಪ್ಪಳ್ಳಿ, ಬಿಸಲಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎನ್.ಗಂಗಾಧರ, ಮಹೇಶ ಶೆಟ್ಟಿ ಚಿಪಗಿ ಮತ್ತಿತರರು ಇದ್ದರು