ಮಂಗಳವಾರ ಸಂಜೆ ಹಳದೀಪುರಕ್ಕೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥಯಾತ್ರೆಯನ್ನು(Rathayatre) ಭವ್ಯವಾಗಿ ಸ್ವಾಗತಿಸಲಾಯಿತು. 
ಉತ್ತರ ಕನ್ನಡ

ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ Rathayatre

ಹೊನ್ನಾವರ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ಸಂಸ್ಥಾಪನಾ ಮಹೋತ್ಸವದ ಅಂಗವಾಗಿ ಹೊರಟಿರುವ ಶ್ರೀ ರಾಮ ದಿಗ್ವಿಜಯ ರಥಯಾತ್ರೆಯು ಮಂಗಳವಾರ ಹಳದಿಪುರವನ್ನು ಪ್ರವೇಶಿಸಿತು.
ಭಕ್ತಿಪೂರ್ವಕ ಮೆರವಣಿಗೆ: ಸಂಜೆ ರಥವು ಹಳದಿಪುರಕ್ಕೆ ಆಗಮಿಸುತ್ತಿದ್ದಂತೆ, ಸ್ಥಳೀಯ ಭಕ್ತಾದಿಗಳು, ಪ್ರಮುಖರು ಮತ್ತು ಸಂಘಟನೆಗಳು ಸೇರಿ ರಥಕ್ಕೆ ಹೂವಿನ ಮಳೆ ಸುರಿಸಿ ಹರ್ಷೋದ್ಘಾರಗಳಿಂದ ಸ್ವಾಗತಿಸಿದರು.
ರಥಯಾತ್ರೆಯು ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆವರಣದಿಂದ ಆರಂಭಗೊಂಡಿತು. ಭವ್ಯ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಕಲಾ ತಂಡಗಳು, ಮಂಗಳವಾದ್ಯಗಳು ಮತ್ತು ಮಹಿಳಾ ಭಕ್ತಾದಿಗಳ ಪೂರ್ಣಕುಂಭ ಕಲಶಗಳು ಶೋಭೆ ತಂದವು.
ಜೈ ಶ್ರೀ ರಾಮ್ ಘೋಷಗಳೊಂದಿಗೆ ಸಾಗಿದ ಈ ರಥವು ಹಳದಿಪುರದ ಹೆದ್ದಾರಿ ಮೂಲಕ ಸಂಚರಿಸಿ, ಭಕ್ತರಿಗೆ ರಾಮದರ್ಶನದ ಭಾಗ್ಯ ಕಲ್ಪಿಸಿತು.
ಮೆರವಣಿಗೆಯು ಹಳದೀಪುರ ಪರಿಸರದ ಪ್ರಮುಖ ಆರಾಧನಾ ಕೇಂದ್ರವಾದ ಶ್ರೀ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಮೂಲಕ ಸಾಗಿ, ಅಂತಿಮವಾಗಿ ಶ್ರೀ ಗೋಪಿನಾಥ ಮಠವನ್ನು ತಲುಪಿತು.

ರಾಮನಾಮ ಜಪದ ಸಂಕಲ್ಪ

ಪರ್ತಗಾಳಿ ಮಠವು ತನ್ನ 550ನೇ ವರ್ಷಾಚರಣೆಯ ಭಾಗವಾಗಿ ದೇಶದಾದ್ಯಂತ 550 ಕೋಟಿ ರಾಮನಾಮ ಜಪ ಅಭಿಯಾನವನ್ನು ನಡೆಸುತ್ತಿದೆ. ಈ ರಥಯಾತ್ರೆಯು ಅದೇ ಸಂಕಲ್ಪದ ಭಾಗವಾಗಿದ್ದು, ರಾಮಚಂದ್ರರ ಮೂರ್ತಿಯನ್ನು ದೇಶದ ಸಾವಿರಾರು ಭಕ್ತರ ಕೇಂದ್ರಗಳಿಗೆ ಕೊಂಡೊಯ್ಯುವ ಉದ್ದೇಶ ಹೊಂದಿದೆ.
ರಾತ್ರಿ ರಥವು ಶ್ರೀ ಗೋಪಿನಾಥ ಮಠದಲ್ಲಿ ವಾಸ್ತವ್ಯ ಹೂಡಲಿದ್ದು, ವಿಶೇಷ ಪೂಜೆ, ರಾಮನಾಮ ಸಂಕೀರ್ತನೆ ಮತ್ತು ಧಾರ್ಮಿಕ ಸಭೆಗಳನ್ನು ಆಯೋಜಿಸಲಾಗಿದೆ.
ಗೋಕರ್ಣ ಪರ್ತಗಾಳಿ ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ರಥಯಾತ್ರೆಯ ದರ್ಶನ ಪಡೆಯಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತಸಮೂಹ ಆಗಮಿಸಿತ್ತು.