ಭಾರತೀಯ ಹವಾಮಾನ ಇಲಾಖೆಯ ಅಟ್ಲಾಸ್. 
ಜಿಲ್ಲೆ

ಉತ್ತರ ಕನ್ನಡ ಅತಿ ಅಪಾಯಕಾರಿ ಜಿಲ್ಲೆ; ದೇಶದ ನೈಸರ್ಗಿಕ ವಿಕೋಪದ ವಿವರಗಳಿರುವ ಅಟ್ಲಾಸ್​ನಲ್ಲಿ ಮಾಹಿತಿ

Webdesk - Ravikanth

| ಸುಭಾಸ ಧೂಪದಹೊಂಡ ಕಾರವಾರ

ದೇಶದ ನೈಸರ್ಗಿಕ ವಿಕೋಪದ ಸಂಪೂರ್ಣ ವಿವರಗಳಿರುವ ಅಟ್ಲಾಸ್ ಅನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೊದಲ ಬಾರಿಗೆ ಸಿದ್ಧ ಮಾಡಿದೆ. ಅದರಲ್ಲಿ ಮಳೆ ಸಂಬಂಧ ಅತಿ ಅಪಾಯಕಾರಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯೂ ಸ್ಥಾನ ಪಡೆದುಕೊಂಡಿದೆ.

ಭಾರತೀಯ ಹವಾಮಾನ ಇಲಾಖೆಯ ಪುಣೆಯ ಹವಾಮಾನ ಸಂಶೋಧನೆ ಮತ್ತು ಸೇವೆ (ಸಿಆರ್​ಎಸ್)ವಿಭಾಗದ ವಿಜ್ಞಾನಿಗಳು ಈ ಅಟ್ಲಾಸನ್ನು ಸಿದ್ಧಪಡಿಸಿದ್ದಾರೆ. ಇಲಾಖೆಯ 147ನೇ ಸಂಸ್ಥಾಪನಾ ದಿನಾಚರಣೆಯ ದಿನ ಪುಣೆಯಲ್ಲಿ ಅಟ್ಲಾಸ್ ಅನ್ನು ಭೂ ವಿಜ್ಞಾನ ಸಚಿವಾಲಯದ ಮುಖ್ಯಸ್ಥ ಜಿತೇಂದ್ರ ಸಿಂಗ್ ಬಿಡುಗಡೆ ಮಾಡಿದ್ದಾರೆ. ಅತಿವೃಷ್ಟಿ, ಬಿರುಗಾಳಿ, ಶೀತಗಾಳಿ, ಸೇರಿ 13 ಹವಾಮಾನ ವೈಪರೀತ್ಯಗಳ ಬಗ್ಗೆ ಸಂಪೂರ್ಣ ವಿವರ ಅಟ್ಲಾಸ್​ನಲ್ಲಿದೆ. ಜಿಲ್ಲಾ ವಿಪತ್ತು ನಿರ್ವಹಣಾ ದಳಗಳಿಗೆ ವಿಪತ್ತು ಎದುರಿಸಲು ಸಹಕಾರಿಯಾಗಲು ಇದನ್ನು ಸಿದ್ಧಪಡಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೇಶದಲ್ಲಿ ಬಿರುಗಾಳಿ, ಮಳೆಯಿಂದ ತೊಂದರೆಗೆ ಒಳಗಾಗಬಹುದಾದ 10ಕ್ಕೂ ಅಧಿಕ ಜಿಲ್ಲೆಗಳ ಪಟ್ಟಿಯನ್ನು ಗುರುತಿಸಲಾಗಿದ್ದು, ಅದರಲ್ಲಿ ಉತ್ತರ ಕನ್ನಡವೂ ಸೇರಿದೆ. ಪಶ್ಚಿಮ ಕರಾವಳಿಯಲ್ಲಿ ಮಹಾರಾಷ್ಟ್ರದ ರತ್ನಾಗಿರಿ, ಸಿಂದದುರ್ಗ, ಗೋವಾದ ದಕ್ಷಿಣ ಗೋವಾ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಅರಬ್ಬಿ ಸಮುದ್ರದ ಕಡೆಯಿಂದ ಅತಿ ಹೆಚ್ಚು ಬಿರುಗಾಳಿಯನ್ನು ಎದುರಿಸಿದ ಜಿಲ್ಲೆಯಾಗಿದೆ ಹಾಗೂ ವಾರ್ಷಿಕ ಸರಾಸರಿ 50 ರಿಂದ 60 ಸೆಂ.ಮೀ. ಮಳೆ ಬೀಳಬಹುದಾದ ಪ್ರದೇಶಗಳು ಎಂದು ಗುರುತಿಸಲಾಗಿದೆ.

1951-2019ರವರೆಗೆ ಮಾಹಿತಿ: ಅಟ್ಲಾಸ್​ನಲ್ಲಿ ಒಟ್ಟು 640 ನಕ್ಷೆಗಳಿವೆ. 1951 ರಿಂದ 2019ರ ವರೆಗೆ ದೇಶದ ಎಲ್ಲ ಜಿಲ್ಲೆಗಳ ತಿಂಗಳವಾರು ಗರಿಷ್ಠ ಗಾಳಿಯ ವೇಗ, ಬಿದ್ದ ಗರಿಷ್ಠ ಮಳೆ, ಉಷ್ಣಾಂಶ, ಶೀತಗಾಳಿ ಹೀಗೆ ಹವಾಮಾನಕ್ಕೆ ಸಂಬಂಧಿಸಿದ ಎಲ್ಲ ವಿವರಗಳಿವೆ. ಅಟ್ಲಾಸ್​ನಲ್ಲಿ ಕಾಣಿಸುವ ನಕ್ಷೆ ಮೇಲೆ ಕರ್ಸರ್ ಇರಿಸಿದರೆ ಸಂಪೂರ್ಣ ವಿವರ ದೊರೆಯಲಿದೆ. ಒಟ್ಟಾರೆ ಹವಾಮಾನ ಸಂಬಂಧಿ ಡೇಟಾಗಳನ್ನು ಬೆರಳ ತುದಿಯಲ್ಲಿ ಅತಿ ಸುಲಭವಾಗಿ ತೋರಿಸುವ ವ್ಯವಸ್ಥೆ ಇದಾಗಿದೆ.

ಉತ್ತರ ಕನ್ನಡದ ಬಗ್ಗೆ

  • 1969 ರಿಂದ 2019ರ ವರೆಗೆ ಉತ್ತರ ಕನ್ನಡದಲ್ಲಿ 40 ಸಲ ಪ್ರವಾಹ ಸಂಭವಿಸಿದೆ ಎಂದು ಅಟ್ಲಾಸ್​ನಲ್ಲಿ ತಿಳಿಸಲಾಗಿದೆ.
  • 1969 ರಿಂದ 2019ರ ವರೆಗೆ 9 ಬಾರಿ ಭಾರಿ ಪ್ರಮಾಣದಲ್ಲಿ ಮಿಂಚು ಹೊಡೆದಿದೆ. ್ಞ 1951 ರಿಂದ 2019ರ ವರೆಗೆ ಮಾನ್ಸೂನ್ ವೇಳೆ ಜಿಲ್ಲೆಯಲ್ಲಿ ದಿನವೊಂದಕ್ಕೆ ಗರಿಷ್ಠ ಸರಾಸರಿ 115.5 ಮಿಮೀ ಮಳೆಯಾಗಿದೆ.