ಜಿಲ್ಲೆ

ಉತ್ತರ ಕನ್ನಡ ಗೆಲ್ಲೋರ್ಯಾರು..?ಲೆಕ್ಕಾಚಾರ ಜೋರು

Uttara Kannada - Subash Hegde

ಕಾರವಾರ:ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರದಲ್ಲಿ ಭದ್ರವಾಗಿದೆ. ಮತ ಎಣಿಕೆಗೆ ಜೂನ್ 4 ರವರೆಗೆ ಕಾಯಬೇಕಿದೆ. ಕ್ಷೇತ್ರದಲ್ಲಿ ಫಲಿತಾಂಶದ ಬಗ್ಗೆ ಚರ್ಚೆ ಶುರುವಾಗಿದೆ.
ಮಂಗಳವಾರ ಸಾಯಂಕಾಲ ಮತದಾನ ಮುಗಿದ ನಂತರ ಪ್ರತಿ ಮತಗಟ್ಟೆಯಿಂದ ಹೊರಟ ಯಂತ್ರಗಳು ಬುಧವಾರ ಬೆಳಗಿನ ಹೊತ್ತಿಗೆ ಕುಮಟಾ ತಲುಪಿವೆ. ಎ.ವಿ.ಬಾಳಿಗಾ ಕಾಲೇಜ್‌ನಲ್ಲಿ ಸಿದ್ಧ ಮಾಡಲಾದ ಸ್ಟ್ರಾಂಗ್‌ ರೂಂನಲ್ಲಿ ಮತ ಯಂತ್ರಗಳನ್ನು ಮತಗಟ್ಟೆಗಳಿಗನುಸಾರ ಇರಿಸಿ ಚುನಾವಣಾಽಕಾರಿ, ವೀಕ್ಷಕರು, ಅಭ್ಯರ್ಥಿ ಏಜೆಂಟರ ಸಮ್ಮುಖದಲ್ಲಿ ಬಾಗಿಲು ಮುಚ್ಚಿ ಸೀಲ್ ಮಾಡಲಾಯಿತು. ಈ ಪ್ರಕ್ರಿಯೆ ಬುಧವಾರ ಮಧ್ಯಾಹ್ನದವರೆಗೂ ನಡೆಯಿತು.
ಉಕ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, 1977 ಮತಗಟ್ಟೆಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಸ್ಟ್ರಾಂಗ್‌ ರೂಂ. ಮಾಡಲಾಗಿದೆ. ಪ್ರತಿ ಸ್ಟ್ರಾಂಗ್‌ ರೂಂ ಹಾಗೂ ಹೊರಗಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸ್ಟ್ರಾಂಗ್‌ ರೂಂನ ಹೊರಗೆ ಸಶಸ್ತç ಮೀಸಲು ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರ ಹೊರಗೆ ಕಾಲೇಜ್‌ನ ಆವರಣವನ್ನು ಸ್ಥಳೀಯ ಜಿಲ್ಲಾ ಸಶಸ್ತç ಮೀಸಲು ಪಡೆಯ ಪೊಲೀಸರು ಕಾಯುತ್ತಿದ್ದಾರೆ. ತಲಾ 8 ತಾಸಿನಂತೆ 3 ಪಾಳಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ದಿನದ 24 ಗಂಟೆಯೂ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ.
ಭವಿಷ್ಯ ಭದ್ರ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ನೇರ ಹಣಾಹಣಿ ನಡೆದಿತ್ತು. ವರ್ಷದ ಹಿಂದೆ ನಡೆದ ಶಿರಸಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸೋಲು ಅನುಭವಿಸಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿಯಿಂದ, ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದ ಡಾ.ಅಂಜಲಿ ನಿಂಬಾಳಕರ್ ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟಿದ್ದರು. ಇಬ್ಬರ ರಾಜಕೀಯ ಭವಿಷ್ಯ ಇದೇ ಚುನಾವಣೆಯ ಮೇಲೆ ನಿರ್ಧಾರವಾಗಲಿದೆ.
ಮಾರ್ಚ್ ಎರಡನೇ ವಾರದಿಂದ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಾವು ಶುರುವಾಗಿತ್ತು. ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಮತ ಬೇಟೆ ನಡೆದ್ದವು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಬಂದು ಪ್ರಚಾರ ನಡೆಸಿದ್ದರು. ರಾಷ್ಟ್ರೀಯ ವಿಚಾರಗಳ ಜತೆಗೆ ಪರೇಶ ಮೇಸ್ತ ಸಾವಿನ ಪ್ರಕರಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅರಣ್ಯ ಅತಿಕ್ರಮಣ ಸಮಸ್ಯೆ ಮುಂತಾದ ವಿಚಾರಗಳೂ ಚರ್ಚೆಗೆ ಬಂದವು.
ಜತೆಗೆ ಎರಡೂ ಪಕ್ಷಗಳು ತಮ್ಮ ಎದುರಾಳಿಗಳ ಮೈನಸ್ ಪಾಯಿಂಟ್‌ಗಳನ್ನು ಪಟ್ಟಿ ಮಾಡಿ ಅಪ ಪ್ರಚಾರವನ್ನೂ ಪ್ರಾರಂಭಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ, ಪರ ವಿರೋಧ ಚರ್ಚೆಗಳು ಶುರುವಾದವು. ಇದೇ ವಿಚಾರ ತಾರಕಕ್ಕೆ ಹೋಗಿ ಒಂದೆರಡು ಪೊಲೀಸ್ ಪ್ರಕರಣಗಳೂ ದಾಖಲಾದವು. ಒಂದು ಹಂತಕ್ಕೆ ಪಕ್ಷಗಳ ಮುಖಂಡರ ಕೆಸರೆರಚಾಟ ವೈಯಕ್ತಿಕ ಹಂತಕ್ಕೆ ತಲುಪಿತ್ತು. ಒಟ್ಟಿನಲ್ಲಿ ಕಳೆದ ಒಂದು ತಿಂಗಳ ರಾಜಕೀಯ ದೊಂಬರಾಟ, ಭರವಸೆಗಳ ಮೇಲಾಟ, ಕೆಸರೆರಚಾಟ ಎಲ್ಲವನ್ನೂ ಸೂಕ್ಷ÷್ಮವಾಗಿ ವೀಕ್ಷಿಸಿದ ಮತದಾರ ಮಂಗಳವಾರ ತನ್ನ ತೀರ್ಪು ಬರೆದಿದ್ದಾನೆ. ಅದು ಸದ್ಯ ಇವಿಎಂನಲ್ಲಿ ಭದ್ರವಾಗಿದೆ.
ಕುತೂಹಲ:
1999 ರಿಂದ 2004 ರ ನಡುವೆ ಮಾರ್ಗರೇಟ್ ಆಳ್ವಾ ಬಿಟ್ಟರೆ, 1992 ರಿಂದ ಈಚೆಗೆ ಉತ್ತರ ಕನ್ನಡ ಅನಂತ ಕುಮಾರ ಹೆಗಡೆ ಬಿಟ್ಟು ಬೇರೆ ಸಂಸದರ ಮುಖ ಕಂಡಿಲ್ಲ. ಆದರೆ, ಈ ಬಾರಿ ಬದಲಾವಣೆಯಾಗಲಿದೆ. ಅನಂತ ಕುಮಾರ ಹೆಗಡೆ ಟಿಕೆಟ್ ವಂಚಿತರಾಗಿ ಮೂಲೆಗುಂಪಾಗಿದ್ದಾರೆ. ಹಾಗಾಗಿ ಯಾರಾಗಲಿದ್ದಾರೆ ಉತ್ತರ ಕನ್ನಡ ಕ್ಷೇತ್ರದ ನೂತನ ಲೋಕಸಭಾ ಸದಸ್ಯ ಎಂಬ ಚರ್ಚೆ, ಲೆಕ್ಕಾಚಾರ ಗಲ್ಲಿ, ಗಲ್ಲಿಗಳಲ್ಲಿ ನಡೆದಿದೆ.
ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಮುಖಂಡರು, ಕಾರ್ಯಕರ್ತರು, ಬೂತ್‌ವಾರು ಮತದಾನದ ಆಧಾರದ ಮೇಲೆ ಫಲಿತಾಂಶ ಏನಾಗಬಹುದು ಎಂದು ಲೆಕ್ಕಾಚಾರ ಶುರು ಮಾಡಿದ್ದಾರೆ. ನಾಯಕರು ತಮ್ಮ ಮುಂದಿನ ರಾಜಕೀಯ ಭವಿಷ್ಯ ಏನಾಗಬಹುದು ಎಂಬ ಊಹೆಯಲ್ಲಿದ್ದಾರೆ. ಮತದಾರರೂ ಅಷ್ಟೇ ಕುತೂಹಲದಲ್ಲಿದ್ದಾರೆ.