ಜಿಲ್ಲೆ

ಕಾಂಗ್ರೆಸ್ ಸಮಾವೇಶಕ್ಕೆ ಸಾರಿಗೆ ಬಸ್​ ಬಳಕೆ; ಬಸ್‌ ಸಿಗದೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳ ಪರದಾಟ

ರಾಮನಗರ: ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಏತನ್ಮಧ್ಯೆ ಜಿಲ್ಲೆಯ ಕುಣಿಗಲ್‌ ತಾಲೂಕಿನ ವಿದ್ಯಾರ್ಥಿಗಳು ಬಸ್‌ ಇಲ್ಲದೆ ಪರದಾಡಿದ್ದಾರೆ.

ಕುಣಿಗಲ್‌ನಲ್ಲಿ ಕಾಂಗ್ರೆಸ್‌ ಸಮಾವೇಶ ಆಯೋಜಿಸಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ, ಕುಣಿಗಲ್ ತಾಲೂಕಿನ ಹಳ್ಳಿಗಳಿಗೆ ಬಸ್‌ಗಳಿಲ್ಲದ ಕಾರಣ, ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಪರದಾಡಿದ್ದಾರೆ.

ಕಾಂಗ್ರೆಸ್ ಸಮಾವೇಶಕ್ಕೆ ಬಸ್‌ಗಳನ್ನು ನಿಯೋಜನೆ ಮಾಡಿದ ಕಾರಣದಿಂದಾಗಿ, ಗುರುವಾರ ರಾತ್ರಿ ಹಳ್ಳಿಗಳಿಗೆ ತೆರಳಿದ್ದ ಬಸ್‌ಗಳನ್ನು ಅಧಿಕಾರಿಗಳು ಮರಳಿ ಡಿಪೊಗೆ ಕರೆಸಿಕೊಂಡಿದ್ದಾರೆ. ಪರಿಣಾಮ, ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲಾಗದೆ ಆತಂಕದಲ್ಲಿಯೇ ಆಟೋಗಳನ್ನು ಹಿಡಿದು ಪರೀಕ್ಷೆ ಬರೆಯಲು ತೆರಳಿದ್ದಾರೆ.