ಯಲಬುರ್ಗಾ ಸಮೀಪದ ಮಂಗಳೂರು ಗ್ರಾಮದ ರೈತರ ಜಮೀನಲ್ಲಿ ಬಿತ್ತನೆಗೊಂಡ ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿ ಹುಳು ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಗುರುವಾರ ಭೇಟಿ ನೀಟಿ ನಿರ್ವಹಣೆ ಕ್ರಮಗಳ ಬಗ್ಗೆ ಸಲಹೆ ನೀಡಿದರು. 
ಜಿಲ್ಲೆ

ಲದ್ದಿ ಹುಳು ದಾಳಿ ತಡೆಗೆ ಇಮಾಮಕ್ಟಿನ್ ಬೆಂಝೊಯೇಟ್ ಬಳಸಿ

Gangavati - Desk - Veeresh S Ullagaddi

ಯಲಬುರ್ಗಾ: ನಿರಂತರ ಮಳೆಯಿಂದ ಭೂಮಿಯು ಗರಿಷ್ಠ ಪ್ರಮಾಣದ ತೇವಾಂಶ ಹಿಡಿದಿಟ್ಟುಕೊಂಡಿದ್ದು, ಜಮೀಮಿನಲ್ಲಿ ಬಸಿಗಾಲುವೆ ಮಾಡಿ ಹೆಚ್ಚಾದ ನೀರನ್ನು ಹರಿದು ಹೋಗುವಂತೆ ನೋಡಿಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಹೇಳಿದರು.


ಪಟ್ಟಣದ ಕೃಷಿ ಕಚೇರಿಯಲ್ಲಿ ವಿಜಯವಾಣಿಯೊಂದಿಗೆ ಗುರುವಾರ ಮಾತನಾಡಿ, ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಶಿಫಾರಸನಂತೆ ಗೊಬ್ಬರ ಹಾಕಬೇಕು. ಸತತ ಮಳೆಯಿಂದ ಬೆಳೆಗಳಲ್ಲಿ ಕಳೆಯ ಪ್ರಮಾಣ ಹೆಚ್ಚಿದ್ದು, ಕಳೆನಾಶಕ ಸಿಂಪರಣೆ ಮಾಡಿ ಕಳೆ ನಿರ್ವಹಣೆ ಮಾಡಬೇಕು. ತಾಲೂಕುಗಳಲ್ಲಿ ಹೆಸರು, ಅಲಸಂದಿ ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿದ್ದಲ್ಲಿ, ಎಲೆಗಳ ಮೂಲಕ ಪೊಷಕಾಂಶ ಒದಗಿಸಬೇಕು ಎಂದರು.


ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 17:44:00, ಅಥವಾ 00:00:50 ಪ್ರತಿ ಲೀಟರ್ ನೀರಿಗೆ 5 ರಿಂದ 10 ಗ್ರಾಂ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ ಕನಿಷ್ಠ 200 ಲೀಟರ್ ಸಿಂಪಡಣಾ ದ್ರಾವಣ ಬಳಸಬೇಕು.

ರಸ ಹೀರುವ ಬಿಳಿನೊಣದ ಮೂಲಕ ಹೆಸರು ಬೆಳೆಗೆ ಹರಡುವ ಹಳದಿ ಸಸಿ ಕಿತ್ತು ಹಾಕಬೇಕು. ಬಿಳಿ ನೊಣಗಳ ಹತೋಟಿಗಾಗಿ ಪ್ರತಿ ಲೀಟರ್ ನೀರಿನಲ್ಲಿ 0.2 ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್, 0.5 ಗ್ರಾಂ ಥೈಯೊಮಿಥಾಕ್ಸಾಮ, 1.7 ಮಿ.ಲೀ, ಡೈಮಿಥೋಯೆಟ್‌ಯಾವುದಾದರೊಂದನ್ನು ಕೀಟನಾಶಕ ಬೆರೆಸಿ ಸಿಂಪಡಿಸಬೇಕು.


ಮಳೆಯಿಂದ ಮೆಕ್ಕೆಜೋಳದಲ್ಲಿ ಕಾಂಡ ಕೊಳೆರೋಗ ಕಂಡು ಬಂದಿದ್ದು, ನಿರ್ವಹಣೆಗಾಗಿ 3 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.5 ಗ್ರಾಂ ಸ್ಪ್ರೆಷ್ಟೋಮೈಸಿನ್ ಸಲ್ಫೇಟ್ ಬೆರೆಸಿದ ದ್ರಾವಣ ಬೇರು ತೊಯ್ಯುವಂತೆ ಮಣ್ಣಿಗೆ ಹಾಕಬೇಕು.

ಮೆಕ್ಕೆಜೋಳದಲ್ಲಿ ಲದ್ದಿ ಹುಳು ಕಾಣಿಸಿಕೊಂಡಿದ್ದು, ನಿರ್ವಹಣೆಗೆ 0.2 ಗ್ರಾಂ ಇಮಾಮಕ್ಟಿನ್ ಬೆಂಝೊಯೇಟ್, ಅಥವಾ 0.2 ಮಿ.ಲಿ. ಸ್ಪೈನೋಸ್ಯಾಡ್ ಅಥವಾ 0.4 ಮಿ.ಲಿ. ಕ್ಲೋರಾಂಟ್ರಿನಿಲಿಪೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವ ಹಾಗೆ ಸಿಂಪಡಿಸಬೇಕು ಎಂದು ತಿಳಿಸಿದರು.