ಬೆಂಗಳೂರು: ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಿಸಲು ಯು.ಎಸ್. ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವೆಲಪ್‌ಮೆಂಟ್ (ಯುಎಸ್ಎಐಡಿ) ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿನ ಆಶಾ ಬೆಂಬಲಿತ ಜೀವನ ಮತ್ತು ಕಲಿಕೆ ಕೇಂದ್ರ ಹಾಗೂ ಮಹಿಳಾ-ಮಕ್ಕಳ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆದಿದ್ದು, ಅದರಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ವೀಣಾ ರೆಡ್ಡಿ ಈ ವಿಷಯ ತಿಳಿಸಿದರು.
ಯುಎಸ್ಎಐಡಿ ಎಂದು ಪ್ರಸಿದ್ಧವಾಗಿರುವ ಯುಎಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವೆಲಪ್‌ಮೆಂಟ್ ಸೇರಿ ಭಾರತದಲ್ಲಿನ ಯುಎಸ್ ಮಿಷನ್ ಪರವಾಗಿ ವರ್ಚುವಲ್ ಆಗಿ ನಿಮ್ಮೊಂದಿಗೆ ಇರಲು ಸಾಧ್ಯವಾಗಿರುವುದು ಗೌರವದ ಸಂಗತಿ ಎಂಬುದಾಗಿ ಅವರು ಹೇಳಿದರು.
ಅಮೆರಿಕ ಸರ್ಕಾರದ ಪರವಾಗಿ ಯುಎಸ್ಎಐಡಿ ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಭಾರತವು ದಕ್ಷಿಣ ಏಷ್ಯಾ ಹಾಗೂ ಜಾಗತಿಕವಾಗಿ ತನ್ನ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಮತ್ತು ನೇತಾರನಾಗಿ ಹೊರ ಹೊಮ್ಮಲು ಅನುವಾಗುವಂತೆ ಬೆಂಬಲ ನೀಡಲು ಬದ್ಧವಾಗಿದೆ.
ಭಾರತದಲ್ಲಿ ಯುಎಸ್ಎಐಡಿ 1979ರಿಂದ ಆಶಾ ಕಾರ್ಯಕ್ರಮದಡಿಯಲ್ಲಿ ಒಟ್ಟು 28 ಮಿಲಿಯನ್ ಡಾಲರ್ ಮೊತ್ತಕ್ಕಿಂತಲೂ ವೆಚ್ಚ ಮಾಡಿದೆ. ಇಂದು ನಾವು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಆಶಾ ಬೆಂಬಲಿತ ಜೀವನ ಮತ್ತು ಕಲಿಕೆ ಕೇಂದ್ರ ಮತ್ತು ಮಹಿಳಾ ಮತ್ತುಮಕ್ಕಳ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟಿಸುತ್ತಿದ್ದೇವೆ. ಈ ಕೇಂದ್ರಗಳು ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಸೇವೆಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಿ, 100 ಹೆಚ್ಚುವರಿ ಹಾಸಿಗೆಗಳನ್ನು ಅಳವಡಿಸಿ 220ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ಒದಗಿಸಲಿದೆ ಎಂದು ವೀಣಾ ರೆಡ್ಡಿ ತಿಳಿಸಿದರು.
ಈ ಹೊಸ ಕೇಂದ್ರಗಳ ಭಾಗವಾಗಿ ಮೊಬೈಲ್ ಪೀಡಿಯಾಟ್ರಿಕ್ ಮತ್ತು ಸಾಂತ್ವನ ಆರೈಕೆ ಮತ್ತು ಸ್ಮಾರ್ಟ್ ತರಗತಿಗಳಂತಹ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿದು ನನಗೆ ಬಹು ಸಂತಸವಾಗಿದೆ. ಭಾರತದ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಇತ್ತೀಚಿನ ಆವಿಷ್ಕಾರಗಳು, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಯುಎಸ್ಐಡಿನ ಉದ್ದೇಶದೊಂದಿಗೆ ಹೊಂದಿಕೆಯಾಗುತ್ತದೆ. ಬೇಲರ್ ವಿಶ್ವವಿದ್ಯಾನಿಲಯದೊಂದಿಗಿನ ನಮ್ಮ ನಿಕಟ ಪಾಲುದಾರಿಕೆ ಮತ್ತು ಸಹಯೋಗದಿಂದಲೇ ಇಂದಿನ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು.
ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕ ಡಾ. ಸ್ಪರ್ಜನ್ ಮತ್ತು ಬೇಲರ್ ವಿಶ್ವವಿದ್ಯಾನಿಲಯದ ಡಾ. ಗಾರ್ನರ್ ಅವರ ಸಮರ್ಥ ಮುಂದಾಳತ್ವದಿಂದ ಈ ಕಾರ್ಯಕ್ರಮ ಸಾಕಾರಗೊಂಡಿದೆ. ಆಸ್ಪತ್ರೆಯನ್ನು ಖುದ್ದಾಗಿ ನೋಡಲು, ಸಿಬ್ಬಂದಿಯೊಂದಿಗೆ ಮಾತನಾಡಲು ಮತ್ತು ಸೇವೆಗಳ ಉಪಯೋಗ ಮಾಡಿಕೊಳ್ಳುತ್ತಿರುವ ಜನರನ್ನು ಭೇಟಿಯಾಗಲು ಕಾತುರಳಾಗಿದ್ದೇನೆ. ಪ್ರಯಾಣ ಮತ್ತು ಸಭೆ ನಡೆಸಲು ಸುರಕ್ಷಿತ ಪರಿಸ್ಥಿತಿ ನಿರ್ಮಾಣವಾಗಿ ಈ ಭೇಟಿ ಸಾಧ್ಯವಾಗುವ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.
ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯು ಲಾಭದ ಉದ್ದೇಶವಿಲ್ಲದೇ ಯಾವುದೇ ಧರ್ಮ, ಜನಾಂಗ ಅಥವಾ ಆರ್ಥಿಕ ಹಿನ್ನೆಲೆಯ ಭೇದ-ಭಾವವಿಲ್ಲದೆ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆ ಹೊಂದಿದೆ. ಅದರ ಮೌಲ್ಯಗಳು ಭಾರತದಲ್ಲಿ ಹಾಗೂ ಪ್ರಪಂಚದಾದ್ಯಂತ ಯುಎಸ್ಎಐಡಿ ನಡೆಸುತ್ತಿರುವ ಕೆಲಸಗಳೊಂದಿಗೆ ಹೊಂದಾಣಿಕೆಯಾಗಿವೆ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಭಾರತದಲ್ಲಿ ಅರೋಗ್ಯ ಸೇವೆಗಳನ್ನು ಉತ್ತಮ ಪಡಿಸಲು ಸಂಶೋಧನೆ, ವಿದ್ಯಾರ್ಥಿವೇತನ ಮತ್ತು ಸಾಮರ್ಥ್ಯವರ್ಧನೆಗಳ ಮೂಲಕ ಬೇಲರ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಗಳು ಜತೆಯಾಗಿ ಬಹುಕಾಲದಿಂದ ಮಾಡುತ್ತಿರುವ ಕೆಲಸಗಳಿಗೆ ಯುಎಸ್ಎಐಡಿ ಪ್ರಶಂಸೆ ವ್ಯಕ್ತಪಡಿಸುತ್ತದೆ ಎಂದೂ ಹೇಳಿದರು.