ಗುರುಪುರ: ಗೋಳಿದಡಿಗುತ್ತಿನ ಶ್ರೀ ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೆಬಲ್ ಟ್ರಸ್ಟ್ ಗುರುಪುರ ಇದರ ‘ಸುಕ್ಷೇತ್ರ ಗುರುಪುರ’ ಇಲ್ಲಿ ಮೇ 15ರಿಂದ 17ರವರೆಗೆ ನಡೆಯಲಿರುವ ಶ್ರೀ ಗುರುಮಹಾಕಾಲೇಶ್ವರನ ಭವ್ಯ ಏಕಶಿಲಾಮೂರ್ತಿ ಪ್ರತಿಷ್ಠಾಪನಾ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ಮತ್ತು ಪಂಚಕಲ್ಯಾಣಯುಕ್ತ ಕಲಶ ರಶೀದಿ ಬಿಡುಗಡೆ ಸಮಾರಂಭ ಗೋಳಿದಡಿಗುತ್ತಿನ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಹಾಗೂ ಬ್ರಹ್ಮಕಲಶ ಸಂಭ್ರಮ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಮಂತ್ರಣ ಪತ್ರಿಕೆ ಮತ್ತು ಕಲಶ ರಶೀದಿ ಬಿಡುಗಡೆಗೊಳಿಸಿದರು.
ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, 2016ರಲ್ಲಿ ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ವೇದ ಕೃಷಿಕ ಬ್ರಹ್ಮಋಷಿ ಕೆ.ಎಸ್.ನಿತ್ಯಾನಂದ ಗುರುಗಳ ಸಂಕಲ್ಪದಂತೆ ಗುರುಪುರ ಗೋಳಿದಡಿಗುತ್ತಿನ ಮನೆಗೆ ಸನಿಹದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿ ತಟದಲ್ಲಿ 45 ಅಡಿ ಎತ್ತರದ ಶ್ರೀ ಗುರು ಮಹಾಕಾಲೇಶ್ವರನ ಏಕಶಿಲಾ ಮೂರ್ತಿ ನಿರ್ಮಾಣಗೊಂಡಿದೆ. 5005 ರೂ.ನೀಡಿ ಕಲಶ ಸ್ವೀಕರಿಸಿದ ಸಾವಿರ ಭಕ್ತರಿಗೆ ಬ್ರಹ್ಮಕಲಶದಂದು(ಮೇ 16ರಂದು) ಕಲಶಾಭಿಷೇಕ ಮಾಡಲು ಅವಕಾಶವಿದೆ. ಸ್ತ್ರೀ-ಪುರುಷ ಲಿಂಗಬೇಧ, ಜಾತಿ ಬೇಧ ಮರೆತು ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶವಿದೆ ಎಂದರು.
ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರುಗುತ್ತು, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಬ್ರಹ್ಮಕಲಶ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ವಕೀಲರಾದ ಶಂಭು ಶರ್ಮ, ಒ.ಟಿ.ಭಟ್ ಮಾತನಾಡಿದರು.
ಗುರುಪುರ ಪ್ರಖಂಡ ಸಮಿತಿ ಅಧ್ಯಕ್ಷ ಚಂದ್ರಹಾಸ ಡಿ.ಅಮೀನ್ ಕಾವೂರು, ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು ಮಜಲೊಟ್ಟು ಬೀಡು ಶಿರ್ವ, ಅನ್ನಸಂತರ್ಪಣೆ ಸಮಿತಿ ಅಧ್ಯಕ್ಷ ಹೋಟೆಲ್ ಉದ್ಯಮಿ ವೈ.ರವಿ ಭಟ್ ಎರ್ಮಾಳ್, ಗೋಳಿದಡಿಗುತ್ತಿನ ಗಡಿಕಾರರ ಪತ್ನಿ ಉಷಾ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಹಲವು ಗುತ್ತು-ಬೀಡು-ಬಾರಿಕೆಯ ಪ್ರಮುಖರು, ಗೋಳಿದಡಿಗುತ್ತಿನ ಚಾವಡಿ ಮಿತ್ರರು, ಊರ ಭಕ್ತರು ಉಪಸ್ಥಿತರಿದ್ದರು.
ಬ್ರಹ್ಮಕಲಶ ಸಂಭ್ರಮ ಸಮಿತಿ ಕಾರ್ಯದರ್ಶಿ ಸುನಿಲಾ ಪಿ.ಶೆಟ್ಟಿ ಸ್ವಾಗತಿಸಿದರು. ಡಾ.ಸಮನಾ ಶೆಟ್ಟಿ ಪ್ರಾರ್ಥನೆಗೈದರು. ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ ಸಮಿತಿ ಸಂಚಾಲಕ ನವೀನ್ ಶೆಟ್ಟಿ ಎಡ್ಮೆಮಾರುಗುತ್ತು ನಿರೂಪಿಸಿದರು.