ಜಿಲ್ಲೆ

11ರಿಂದ ಶೇಣಿಯಲ್ಲಿ ಉಪಜಿಲ್ಲಾ ಕಲೋತ್ಸವ

ಕುಂಬಳೆ: ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ.11,12 ಹಾಗೂ 18,19 ಮತ್ತು 20ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕಲೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

11ರಂದು ಬೆಳಗ್ಗೆ 9.30ಕ್ಕೆ ಶ್ರೀ ಶಾರದಾಂಬಾ ವಿದ್ಯಾಸಂಸ್ಥೆಯ ಪ್ರಬಂಧಕಿ ಶಾರದಾ ವೈ. ಧ್ವಜಾರೋಹಣ ನೆರವೇರಿಸುವರು. ಬಳಿಕ ಎರಡು ದಿನಗಳ ವೇದಿಕೆಯೇತರ ಸ್ಪರ್ಧೆಗಳು ನಡೆಯಲಿವೆ. 18ರಂದು ಅಪರಾಹ್ನ 2.30ಕ್ಕೆ ಕಲೋತ್ಸವದ ಉದ್ಘಾಟನೆ ಜರುಗಲಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು.

11, 12ರಂದು ನಡೆಯಲಿರುವ ವೇದಿಕೆಯೇತರ ಸ್ಪರ್ಧೆಗಳಲ್ಲಿ ಸುಮಾರು 2000 ಸ್ಪರ್ಧಾಳುಗಳು ಪ್ರತಿಭೆಯನ್ನು ಪ್ರದರ್ಶಿಸಲಿದ್ದು, 18,19 ಮತ್ತು 20 ರವರೆಗೆ ಸುಮಾರು 5000 ಸ್ಪರ್ಧಾಳುಗಳು ವಿವಿಧ ಕಲಾಸ್ಪರ್ಧೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲಿರುವರು. ಒಟ್ಟು ಉಪಜಿಲ್ಲೆಯ 93 ಶಾಲೆಗಳ 7000ಕ್ಕೂ ಹೆಚ್ಚು ವಿದ್ಯಾರ್ಥಿಗಳು 16 ವೇದಿಕೆಗಳಲ್ಲಿ 350ಕ್ಕೂ ಹೆಚ್ಚು ಪ್ರಕಾರಗಳಲ್ಲಿ ಪ್ರತಿಭಾ ಪ್ರದರ್ಶನವನ್ನು ನೀಡಲಿದ್ದಾರೆ. 20ರಂದು ಸಂಜೆ 4 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಎಂದವರು ತಿಳಿಸಿದರು.

ಶೇಣಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ಜೆ.ಎಸ್., ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ, ಶೇಣಿ ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಾಸ್ತಾ ಕುಮಾರ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಶ್ರೀಶ ಕುಮಾರ್, ಪಿಟಿಎ ಉಪಾಧ್ಯಕ್ಷ ಉಮರ್ ಕಂಗಿನಮೂಲೆ, ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಎಂ., ಹಳೇ ವಿದ್ಯಾರ್ಥಿ ಸಂಘದ ಜತೆಕಾರ್ಯದರ್ಶಿ ಮುಂದರಲಿ ಕುದ್ರೆಡ್ಕ ಮಾಹಿತಿ ನೀಡಿದರು.