ಬೆಂಗಳೂರು: ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುವಲ್ಲಿ ಕಾಂಗ್ರೆಸ್ ನಿಸ್ಸೀಮ. ಕೊಟ್ಟ ಭರವಸೆ ಈಡೇರಿಸಬೇಕೆಂಬ ಬದ್ಧತೆ ಆ ಪಕ್ಷಕ್ಕೆ ಇಲ್ಲವೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೇಳಿದ್ದನ್ನೇ ಮಾಡುತ್ತದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಸಾಧಿಸಿದ ಪ್ರಗತಿ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ನಿದರ್ಶನವೆಂದು ಹೇಳಿದರು.
ಸ್ವಚ್ಛ ಭಾರತ ಮಿಷನ್ ನಡಿ ಶೌಚಗೃಹ ನಿರ್ಮಾಣ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ, ಮನೆಗಳಿಗೆ ನಲ್ಲಿ ನೀರಿನ ಸಂಪರ್ಕದ ಮೂಲಕ ಮಹಿಳೆಯರ ಬಗ್ಗೆ ವಿಶೇಷ ಕಾಳಜಿವಹಿಸಿದ್ದಾರೆ.
ಬಡವರ ನೆನಪಾಗಿದೆ
ರಾಜ್ಯದಲ್ಲೂ ಈ ಹಿಂದೆ ಯಡಿಯೂರಪ್ಪ ಆಡಳಿತಾವಧಿಯಲ್ಲಿ ವಿಧವಾ ಮಾಸಾಶನ ಹೆಚ್ಚಿಸಲಾಯಿತು. ಸಂಧ್ಯಾ ಸುರಕ್ಷಾ ಯೋಜನೆಯಡಿ ಪ್ರತಿ ಹಿರಿಯ ದಂಪತಿ ಕುಟುಂಬಕ್ಕೆ ಮಾಸಿಕ 2,400 ರೂ ನೀಡುವ ಯೋಜನೆ 2008ರಲ್ಲೇ ಬಿಜೆಪಿ ಆರಂಭಿಸಿದೆ. ಆದರೆ ಕಾಂಗ್ರೆಸ್ ಈಗ ಗ್ಯಾರಂಟಿ ಭರವಸೆಯಡಿ ಮಾಸಿಕ 2000 ರೂ ನೀಡುವುದಾಗಿ ಹೇಳುತ್ತಿದೆ. ಚುನಾವಣೆ ಬಂದಿರುವ ಕಾರಣಕ್ಕೆ ಬಡವರ ನೆನಪಾಗಿದೆ ಎಂದು ಛೇಡಿಸಿದರು.
ನಂದಿನಿ ನಮ್ಮ ರಾಜ್ಯದ ಹೆಮ್ಮೆ
ಕೆಎಂಎಫ್, ನಂದಿನಿ ವಿಚಾರವಾಗಿ ಪ್ರತಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ನಂದಿನಿ ನಮ್ಮ ರಾಜ್ಯದ ಹೆಮ್ಮೆ. ಕೆಎಂಎಫ್ ಬಲವರ್ಧನೆಗೆ ಬಿಜೆಪಿ ಸರ್ಕಾರ ಕಾಲಕಾಲಕ್ಕೆ ಅಗತ್ಯ ನೆರವು ನೀಡಿದೆ ಎಂದು ಸಮರ್ಥಿಸಿಕೊಂಡರು.
ಮೂಗು ತೂರಿಸುವ ಅಗತ್ಯವಿಲ್ಲ
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯೂ ಪಕ್ಷದ ಕಾರ್ಯತಂತ್ರ. ಆಂತರಿಕ ವಿಷಯದಲ್ಲಿ ಪ್ರತಿಪಕ್ಷಗಳು ಮೂಗು ತೂರಿಸುವ ಅಗತ್ಯವಿಲ್ಲ. ಯಾವಾಗ ಏನು ಮಾಡಬೇಕು, ಪಟ್ಟಿ ಬಿಡುಗಡೆ ಮಾಡಬೇಕು ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.