ಜಿಲ್ಲೆ

ಪಡುಮಲೆ ಅಭಿವೃದ್ಧಿಗೆ ಗ್ರಹಣ : ಅನುಷ್ಠಾನಗೊಳ್ಳದ ಪ್ರವಾಸೋದ್ಯಮ ಯೋಜನೆ : 10 ವರ್ಷದಿಂದ ನನೆಗುದಿಗೆ

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಭೂಮಿ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆಯನ್ನು ಪ್ರವಾಸೋದ್ಯಮ ತಾಣವಾಗಿಸುವ 10 ವರ್ಷದ ಹಿಂದಿನ 5 ಕೋಟಿ ರೂ.ಯೋಜನೆ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಈ ಸ್ಥಿತಿ ಬಂದೊದಗಿದೆ.

ಪಡುಮಲೆಯನ್ನು ಪ್ರವಾಸೋದ್ಯಮ ತಾಣವಾಗಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಗಳ ಅನುಷ್ಠಾನಕ್ಕಾಗಿ ಬಿಡುಗಡೆಗೊಂಡಿದ್ದ 1.50 ಕೋಟಿ ರೂ.ಯಲ್ಲಿ ಕೊಳವೆಬಾವಿ ನಿರ್ಮಾಣ, ನೀರಿನ ಟಾಂಕಿ ನಿರ್ಮಾಣ ಬಿಟ್ಟರೆ ಬೇರಾವುದೇ ಕಾಮಗಾರಿ ನಡೆದಿಲ್ಲ. ಆರಂಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಕೈಯಲ್ಲಿದ್ದ ಯೋಜನೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಆಗಿರುವುದು ಬಿಟ್ಟರೆ ಬೇರೇನೂ ಮಹತ್ಕಾರ್ಯ ಆಗಿಲ್ಲ.

ಹಿಂದಿನ ಶಾಸಕರು ಪಡುಮಲೆ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಆಸಕ್ತಿ ತೋರಿಲ್ಲ. ಈಗಿನ ಶಾಸಕರು ಕೂಡ ಪಡುಮಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಲು ಗಮನ ಹರಿಸಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ವಿಚಾರವನ್ನು ಮರೆತು ಬಿಟ್ಟಿದ್ದಾರೆ. ಯೋಜನೆ ಅನುಷ್ಠಾನದ ವಿಚಾರದಲ್ಲಿ 10 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ ಮತ್ತು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದ್ದ ಪ್ರತ್ಯೇಕ ಎರಡು ಸಮಿತಿಗಳ ಸದಸ್ಯರು ಕೂಡ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಯೋಜನೆಗೆ ಪುನರ್ಜೀವ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

ಪಡುಮಲೆಯ ಅಭಿವೃದ್ಧಿಗಾಗಿ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ 25 ಲಕ್ಷ ರೂ.ಅನುದಾನ ಮಂಜೂರು ಮಾಡಿದ್ದರು. ಬಳಿಕ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯಕುಮಾರ್ ಸೊರಕೆ ಪ್ರಯತ್ನದ ಫಲವಾಗಿ ಆ ಅವಧಿಯ ಮೊದಲ ಬಜೆಟ್‌ನಲ್ಲಿಯೇ ಪಡುಮಲೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಈ ಪೈಕಿ ಮೊದಲ ಹಂತದ ಕಾಮಗಾರಿಗಳಿಗಾಗಿ 1.50 ಕೋಟಿ ರೂ. ಬಿಡುಗಡೆಯಾಗಿತ್ತು. 10 ವರ್ಷ ಕಳೆದರೂ ಪ್ರವಾಸೋದ್ಯಮ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿ ಉಳಿದಿದೆ. ಪಡುಮಲೆ ಪ್ರವಾಸೋದ್ಯಮ ತಾಣವಾಗುತ್ತದೆ ಎಂಬ ಕನಸು ಮರಿ ಹೋಗಿದ್ದು, ಇದೀಗ ಆ ಭಾಗದ ಜನತೆ ಈ ವಿಚಾರವನ್ನೇ ಮರೆತು ಬಿಟ್ಟಿದ್ದಾರೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ನೇತೃತ್ವದಲ್ಲಿ ಶಂಖಪಾಲ ಬೆಟ್ಟದಲ್ಲಿ 2015ರ ಜನವರಿ 27ರಂದು ಪ್ರಥಮ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಬೆಟ್ಟಕ್ಕೇರಲು ತಾತ್ಕಾಲಿಕ ದಾರಿ ರಚನೆ, ಕೊಳವೆಬಾವಿ ನಿರ್ಮಾಣ, ಕುಡಿಯುವ ನೀರಿನ ಯೋಜನೆಯ ಟ್ಯಾಂಕೊಂದರ ನಿರ್ಮಾಣ ಬಿಟ್ಟರೆ ಬೇರಾವುದೇ ಅಭಿವೃದ್ಧಿ ಕೆಲಸಗಳು ಅಲ್ಲಿ ಈ ತನಕ ನಡೆದಿಲ್ಲ. ಯೋಜನೆ ಮುಂದುವರಿಯದ ಪರಿಣಾಮವಾಗಿ ಮಾಡಿದ ಈ ಸಣ್ಣಪುಟ್ಟ ಕೆಲಸಗಳು ನಿಷ್ಪ್ರಯೋಜಕವಾಗಿವೆ.

ರಮಾನಾಥ ರೈ ಅರಣ್ಯ ಇಲಾಖೆಯ ವತಿಯಿಂದ ರೂ.50 ಲಕ್ಷ ಅನುದಾನದಲ್ಲಿ ಮುಡ್ಪಿನಡ್ಕ ಸಮೀಪ ‘ದೇಯಿ ಬೈದ್ಯೆತಿ’ ಹೆಸರಿನಲ್ಲಿ ಔಷಧೀಯ ವನ ನಿರ್ಮಿಸುವಲ್ಲಿ ತೋರಿದ್ದ ಆಸಕ್ತಿಯನ್ನು ಪಡುಮಲೆ ಪ್ರವಾಸೋದ್ಯಮ ಯೋಜನೆಯ ವಿಚಾರದಲ್ಲಿ ತೋರಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಸಂಜೀವ ಮಠಂದೂರು ಇಲ್ಲಿ ನಡೆದ ಖಾಸಗಿ ವ್ಯವಸ್ಥೆಗಳ ಕಡೆಗೆ ಆದ್ಯತೆ ನೀಡಿದ್ದರೇ ಹೊರತು ಪ್ರವಾಸೋದ್ಯಮ ಯೋಜನೆಯ ಅನುಷ್ಠಾನದ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಜನತೆಯ ಆರೋಪ.

ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪಡುಮಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ವಹಿಸಿಕೊಂಡಿದ್ದು, ಇದು ಆ ವೇಳೆ ಪುತ್ತೂರಿನಲ್ಲಿ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರ ಅಸಮಾಧಾನ ಮತ್ತು ಪಕ್ಷದೊಳಗೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿತ್ತು. ಆ ಕಾರಣದಿಂದಾಗಿಯೇ ಶಕುಂತಳಾ ಶೆಟ್ಟಿ ಪಡುಮಲೆ ಅಭಿವೃದ್ಧಿಯಿಂದ ದೂರ ಉಳಿದುಕೊಂಡಿದ್ದರು. ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಶಾಸಕ ಸಂಜೀವ ಮಠಂದೂರು ಕೂಡ ತನ್ನ ಅವಧಿಯಲ್ಲಿ ಪಡುಮಲೆ ಪ್ರವಾಸೋದ್ಯಮ ಅಭಿವೃದ್ಧಿಯ ವಿಚಾರದಲ್ಲಿ ಮೌನವಹಿಸಿದ್ದರು.

ಹೀಗಿದೆ ಯೋಜನೆ

ಪಡುಮಲೆಯ ಐತಿಹಾಸಿಕ ಕುರುಹುಗಳಿರುವ ಸ್ಥಳಗಳ ಪೈಕಿ ಬಡಗನ್ನೂರು ಗ್ರಾಮದ ಕೊಲ ಸಮೀಪವಿರುವ ಶಂಕಪಾಲ ಬೆಟ್ಟದಲ್ಲಿ 2.75 ಎಕರೆಯಷ್ಟು ಸರ್ಕಾರಿ ಸ್ಥಳವಿದೆ. ಶಂಖಪಾಲ ಬೆಟ್ಟದಲ್ಲಿಯೇ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಶಂಖಪಾಲ ಬೆಟ್ಟದ ತುದಿಯಲ್ಲಿ 90 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಸಭಾಭವನ, 40 ಲಕ್ಷ ರೂ.ವೆಚ್ಚದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ-ಗ್ರಂಥಾಲಯ, 8 ಲಕ್ಷ ರೂ.ವೆಚ್ಚದಲ್ಲಿ ಶೌಚಗೃಹ ನಿರ್ಮಾಣ, 40 ಲಕ್ಷ ರೂ. ವೆಚ್ಚದಲ್ಲಿ ಬೆಟ್ಟಕ್ಕೆ ಏರಲು ಎರಡು ಬದಿಗಳಿಂದ ನಡೆದಾಡುವ ಮೆಟ್ಟಿಲು ಹಾಗೂ ಹಸಿರು ಪಾರ್ಕ್ ವ್ಯವಸ್ಥೆ, 30 ಲಕ್ಷ ರೂ.ವೆಚ್ಚದಲ್ಲಿ ನೆಲಸಮತಟ್ಟು ಹಾಗೂ ನೀರಿನ ವ್ಯವಸ್ಥೆ, 10 ಲಕ್ಷ ರೂ.ವೆಚ್ಚದಲ್ಲಿ ಮಾಹಿತಿ ಫಲಕಗಳ ಅಳವಡಿಕೆ ಮೊದಲಾದ ವ್ಯವಸ್ಥೆಗಳನ್ನು ನಡೆಸಲು ಅಂದಾಜು 2.75 ಕೋಟಿ ರೂ. ಮೊದಲ ಹಂತದ ಯೋಜನೆ ರೂಪಿಸಲಾಗಿತ್ತು. ಎರಡನೇ ಹಂತದಲ್ಲಿ ಕೋಟಿ-ಚೆನ್ನಯ ಹಾಗೂ ದೇಯಿ ಬೈದ್ಯೆತಿಯ ಬೃಹತ್ ಪ್ರತಿಮೆ ಸ್ಥಾಪನೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು.

ಪಡುಮಲೆ ಪ್ರವಾಸೋದ್ಯಮ ಯೋಜನೆ ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿದ್ದು, ಈ ವಿಚಾರದಲ್ಲಿ ಹಿಂದೆಯೂ ಎರಡು ಬಾರಿ ಸಂಬಂಧಪಟ್ಟ ಇಲಾಖೆಗೆ ಪುತ್ತೂರು ಉಪವಿಭಾಗಾಧಿಕಾರಿ ಕಚೇರಿಯಿಂದ ಪತ್ರ ಬರೆಯಲಾಗಿದೆ. ಬಿಡುಗಡೆ ಮಾಡಲಾದ ಅನುದಾನದ ಬಳಕೆಯ ವಿಚಾರದಲ್ಲಿ ಇನ್ನೊಮ್ಮೆ ಪತ್ರ ಬರೆಯಲಾಗುವುದು. ಮುಂದಿನ ವಾರದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗುವುದು. - ಜುಬಿನ್ ಮೊಹಾಪಾತ್ರ, ಉಪವಿಭಾಗಾಧಿಕಾರಿ ಪುತ್ತೂರು.