ಬೆಂಗಳೂರು: ಇಡ್ಲಿ ಎಂದ್ರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುತ್ತದೆ. ಇಡ್ಲಿ ಜತೆ ಬಿಸಿ ಬಿಸಿಯಾದ ಸಾಂಬಾರ್, ಚಟ್ನಿ ಒಂದು ವಡೆ ಇದ್ರೆ ಸಾಕು. ನಾಲಿಗೆಗೆ ರುಚಿ ಹಿಡಿಯುತ್ತದೆ. ದಕ್ಷಿಣ ಭಾರತದ ಸಾಂಪ್ರದಾಯಕ ತಿನಿಸುಗಳಲ್ಲಿ ಒಂದು. ಆದರೆ ಸ್ಯಾಂಡಲ್ವುಡ್ ನಟ ಸುದೀಪ್ ಅವರಿಗೆ ಬ್ಯಾಂಗಲೋರ್ ಇಡ್ಲಿ ಬೇಡಾ ಅಂತೆ. ಕಿಚ್ಚಾ ಯಾಕೆ ಹೀಗೆ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಕರೆಯಲಾಗುತ್ತಿದೆ. ಆದರೆ, ಇಂಗ್ಲಿಷ್ನಲ್ಲಿ Bengaluru ಬದಲು Bangalore ಎನ್ನುವ ಸ್ಪೆಲ್ಲಿಂಗ್ ಇದೆ. ಅಭಿಮಾನಿಗಳ ಬಹುವರ್ಷಗಳ ಬೇಡಿಕೆಯನ್ನು ಆರ್ಸಿಬಿ ತಂಡ ಕೊನೆಗೂ ಈಡೇರಿಸಲು ಮುಂದಾಗಿದೆ. ಇಂಗ್ಲಿಷ್ನಲ್ಲಿ “ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್’ (Bangalore) ಎಂದಿರುವ ತಂಡದ ಹೆಸರು ಇನ್ಮುಂದೆ “ರಾಯಲ್ ಚಾಲೆಂಜರ್ಸ್ ಬೆಂಗಳೂರು’ (Bengaluru) ಎಂದು ಬದಲಾಗುವ ನಿರೀಕ್ಷೆ ಇದೆ.
ಮಾರ್ಚ್ 19ರಂದು ‘ಆರ್ಸಿಬಿ ಅನ್ಬಾಕ್ಸ್’ ಕಾರ್ಯಕ್ರಮ ನಡೆಸಲಿದೆ. ಮಾರ್ಚ್ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಈ ಕುರಿತಾದ ಪ್ರೋಮೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಿಷಬ್ ಶೆಟ್ಟಿ, ಶಿವರಾಜ್ಕುಮಾರ್, ಸುದೀಪ್ ಅವರು ಕಾಣಿಸಿಕೊಂಡಿರುವ ಪ್ರೋಮೋಗಳು ವೈರಲ್ ಆಗಿವೆ.
ಈ ಸಮಾರಂಭದ ಪ್ರೋಮೊವೊಂದು ಬಿಡುಗಡೆಯಾಗಿದ್ದು, ಕಂಬಳದ ಕೋಣಗಳೊಂದಿಗೆ ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮೂರು ಕಂಬಳದ ಕೋಣಗಳ ಮೇಲೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಎಂದು ಬರೆದಿರುತ್ತದೆ. ಈ ವೇಳೆ ರಿಷಬ್ ಶೆಟ್ಟಿ ಬ್ಯಾಂಗಲೋರ್ ಹೆಸರಿನ ಕೋಣವನ್ನು ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಇದನ್ನು ಎಂದು ಹೇಳಿ ಅರ್ಥ ಆಯ್ತಾ ಎಂದು ಹೇಳುತ್ತಾರೆ. ರಾಯಲ್ ಚಾಲೆಂಜರ್ಸ್ ಮುಂದೆ ಬೆಂಗಳೂರು ಎನ್ನುವ ಹೆಸರು ಬದಲಾಗುವ ಸಾಧ್ಯತೆ ಎನ್ನುವ ಹಾಗೆ ಈ ಪ್ರೋಮೋದಲ್ಲಿ ಕಂಡು ಬಂದಿದೆ.
ಶಿವರಾಜ್ಕುಮಾರ್ ಅವರ ಎದುರು ಮೂರು ಲಾಂಗ್ಗಳನ್ನು ಇಡಲಾಗಿದೆ. ಒಂದರಲ್ಲಿ ರಾಯಲ್ ಇದ್ದರೆ, ಮತ್ತೊಂದು ಲಾಂಗ್ನಲ್ಲಿ ಚಾಲೆಂಜರ್ಸ್ ಇದೆ. ಕೊನೆಯ ಲಾಂಗ್ನಲ್ಲಿ Bangalore ಎಂದಿತ್ತು. ಶೀಘ್ರವೇ ಇದು ಬದಲಾಗಲಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರು ಕಾಣಿಸಿಕೊಂಡಿರುವ ಪ್ರೋಮೋದಲ್ಲಿ ಕಿಚ್ಚ ಅವರು ಹೋಟೆಲ್ವೊಂದಕ್ಕೆ ಉಪಹಾರ ಸೇವನೆಗೆಂದು ಬರುತ್ತಾರೆ. ಮೂರು ಇಡ್ಲಿ ಕೊಡಿ ಎಂದು ಕೇಳುತ್ತಾರೆ. ಆಗ ವೇಟರ್ ಮೂರು ಇಡ್ಲಿ ತರುತ್ತಾನೆ. ವಿಶೇಷ ಅಂದ್ರೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಎಂದು ಇಂಗ್ಲೀಷ್ನಲ್ಲಿ ಮೂರು ಇಡ್ಲಿ ಮೇಲೆ ಬರೆದಿರುತ್ತದೆ. ವೇಟರ್ ಒಂದೊಂದೆ ಇಡ್ಲಿಯನ್ನು ತಟ್ಟೆಗೆ ಹಾಕುತ್ತಾನೆ. ಆಗ ಸುದೀಪ್ ಅವರು ಬ್ಯಾಂಗಲೋರ್ ಎನ್ನುವ ಇಡ್ಲಿ ಬೇಡಾ ಎಂದು ಹೇಳುತ್ತಾರೆ. ಅರ್ಥ ಆಯ್ತಾ ಎಂದು ಕೊನೆಯಲ್ಲಿ ಕೇಳುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.
ಆರ್ಸಿಬಿ ತಂಡ ಸಾಮಾಜಿಕ ಪ್ರಕಟಿಸಿರುವ ವಿಶೇಷ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್ವುಡ್ ನಟರಾದ ರಿಷಬ್ ಶೆಟ್ಟಿ, ಶಿವರಾಜ್ಕುಮಾರ್, ಸುದೀಪ್ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.