ಪುತ್ತೂರು ಗ್ರಾಮಾಂತರ: ಮುಂಡೂರು ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿ.29ರಂದು ನಡೆಯಲಿದ್ದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಸಹಕಾರಿ ಭಾರತಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡು ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣ ಕಾಂಗ್ರೆಸ್ ಬೆಂಬಲಿತ 12 ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡಿದ್ದಾರೆ.
ಸಾಮಾನ್ಯ ಸ್ಥಾನದಿಂದ ಹಾಲಿ ಅಧ್ಯಕ್ಷ ಸುರೇಶ್‌ಕುಮಾರ್ ಸೊರಕೆ, ಹಾಲಿ ಉಪಾಧ್ಯಕ್ಷ ಯಾಕೂಬ್ ಮುಲಾರ್, ಹಾಲಿ ನಿರ್ದೇಶಕರಾದ ಎಸ್.ಡಿ.ವಸಂತ, ಶಿವನಾಥ ರೈ ಮೇಗಿನಗುತ್ತು, ಸುಧೀರ್‌ಕೃಷ್ಣ ಪಡ್ಡಿಲ್ಲಾಯ, ಇಬ್ರಾಹಿಂ ಮುಲಾರ್, ಅಣ್ಣಿ ಪೂಜಾರಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕೊರಗಪ್ಪ ಸೊರಕೆ, ಪರಿಶಿಷ್ಟ ಪಂಗಡದ ಸ್ಥಾನದಿಂದ ಪದ್ಮಯ್ಯ ಪಿ.ಬಂಡಿಕಾನ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಆನಂದ ಪೂಜಾರಿ ಕೈಯೊಳುಂಕು, ಹಿಂದುಳಿದ ವರ್ಗ ಬಿ ಸ್ಥಾನದಿಂದ ವಸಂತ ಬಿ.ಎನ್, ಮಹಿಳಾ ಮೀಸಲು ಸ್ಥಾನದಿಂದ ಗುಲಾಬಿ ಎನ್.ಶೆಟ್ಟಿ ಮತ್ತು ನಯನಾ ಗಣೇಶ್, ಸಾಲಗಾರರಲ್ಲದ ಸ್ಥಾನದಿಂದ ಶರಣ್ ರೈ ಎಂ. ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅವಿರೋಧವಾಗಿ ಆಯ್ಕೆಗೊಂಡವರೆಲ್ಲರೂ ಕಾಂಗ್ರೆಸ್ ಬೆಂಬಲಿತರು.
ನಾಮಪತ್ರಗಳನ್ನು ಹಿಂಪಡೆದುಕೊಳ್ಳಲು ಸೋಮವಾರ ಕೊನೆಯ ದಿನವಾಗಿತ್ತು. ಚುನಾವಣಾಧಿಕಾರಿಯಾಗಿದ್ದ ಶೋಭಾ ಎನ್.ಎಸ್. ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಮತ್ತು ಸಿಬ್ಬಂದಿ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.