ಜಿಲ್ಲೆ

ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

arunakunigal

ಹುಬ್ಬಳ್ಳಿ: ಚಿತ್ರನಟಿ, ಮಾಜಿ ಸಚಿವೆ ಉಮಾಶ್ರೀ ಕಾರು ಮತ್ತು ಮತ್ತೊಂದು ಕಾರಿನ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ ವೈದ್ಯೆ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ನ.20ರ ರಾತ್ರಿ ಗದಗ ರಸ್ತೆಯ ಬಂಡಿವಾಡ ಬಳಿ ಅಪಘಾತವಾಗಿತ್ತು. ಈ ಘಟನೆಯಲ್ಲಿ ಶೋಭಾ ಕಟ್ಟಿ ಹಾಗೂ ಚಾಲಕ ಸಂದೀಪ ವಿಭೂತಿಮಠ ಎಂಬುವವರು ಸಾವಿಗೀಡಾಗಿದ್ದರು. ಇದೇ ಕಾರಿನಲ್ಲಿದ್ದ ಡಾ.ಸ್ಮಿತಾ ಕಟ್ಟಿ ತೀವ್ರ ಗಾಯಗೊಂಡಿದ್ದರು. ತಾಯಿ ಶೋಭಾ ಕಟ್ಟಿ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಮಗಳು ಡಾ.ಸ್ಮಿತಾ ಕಟ್ಟಿಯೂ ಸಾವನ್ನಪ್ಪಿದ್ದು, ಈ ಮೂಲಕ ಉಮಾಶ್ರೀ ಮಾಲೀಕತ್ವದ ಕಾರಿಗೆ ಮೂವರು ಬಲಿಯಾದಂತಾಗಿದೆ. ಇನ್ನು ಉಮಾಶ್ರೀ ಕಾರು ಚಾಲಕ ಶಿವಕುಮಾರ ಕೂಡ ಗಾಯಗೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಸ್ಮಿತಾ ಕಟ್ಟಿ

ತನ್ನ ಮಾಲೀಕತ್ವದ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದ ಸುದ್ದಿ ತಿಳಿದ ಕೂಡಲೇ ನ.21ರಂದು ಮಾಜಿ ಸಚಿವೆ ಉಮಾಶ್ರೀ ಹುಬ್ಬಳ್ಳಿಗೆ ಆಗಮಿಸಿದ ತೀವ್ರ ನೋವು ತೋಡಿಕೊಂಡಿದ್ದರು. ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಕಾರು ಚಾಲಕನನ್ನು ಭೇಟಿ ಮಾಡಿದ್ದ ಉಮಾಶ್ರೀ, ಅಪಘಾತದಲ್ಲಿ ಇಬ್ಬರು ಜೀವ ತೆತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ. ಯಾಕಪ್ಪಾ ಹೀಗೆ ಮಾಡಿದೆ? ಎಂದು ಚಾಲಕನ ಬಳಿ ಬೇಸರ ವ್ಯಕ್ತಪಡಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಸ್ಮಿತಾ ಕಟ್ಟಿ ಅವರನ್ನೂ ಉಮಾಶ್ರೀ ಭೇಟಿ ಮಾಡಿದ್ದರು.

ಇನ್ನೋವಾದಲ್ಲಿ ನ.15ಕ್ಕೆ ಹುಬ್ಬಳ್ಳಿಗೆ ಬಂದಿದ್ದೆ. 19ಕ್ಕೆ ಪುನಃ ಬೇರೆ ಕಡೆ ಹೋಗಿ ನ.20ಕ್ಕೆ ಹುಬ್ಬಳ್ಳಿಗೆ ಬರುವುದಿತ್ತು. ಹಾಗಾಗಿ ಕಾರನ್ನು ವಾಪಸ್​ ಕಳಿಸುವುದು ಬೇಡ ಎಂದು ಚಾಲಕನ ಬಳಿ ಬಿಟ್ಟಿದ್ದೆ. ಆದರೆ, ಚಾಲಕ ತಾನೊಬ್ಬನೇ ಗಾಡಿ ತೆಗೆದುಕೊಂಡು ಹೋಗಿದ್ದ. ಯಾಕೆ ಹುಬ್ಬಳ್ಳಿಗೆ ಬಂದಿದ್ದ ಎಂಬುದು ಗೊತ್ತಿಲ್ಲ. ಒಂದು ತಿಂಗಳ ಹಿಂದಷ್ಟೇ ಆತನನ್ನು ನಮ್ಮ ಪಕ್ಷದ ಕಾರ್ಯಕರ್ತರು ಪರಿಚಯಿಸಿದ್ದರು. ಇಡೀ ಘಟನೆಯಿಂದ ನನಗೆ ನೋವಾಗಿದೆ ಎಂದು ಅಂದು ಉಮಾಶ್ರೀ ಹೇಳಿಕೊಂಡಿದ್ದರು.