ಜಿಲ್ಲೆ

ಉಳುವರೆಯಲ್ಲೇ ಪುನರ್ವಸತಿ ನೀಡಿ ಎಂದು ಮನವಿ ಮಾಡಿದ ಗ್ರಾಮಸ್ಥರು

Uttara Kannada - Subash Hegde

ಕಾರವಾರ: ಶಿರೂರು ಗುಡ್ಡ ಕುಸಿತದಿಂದ ಬಾಧಿತವಾಗಿರುವ ಉಳುವರೆ ಗ್ರಾಮದಲ್ಲಿಯೇ ಸಂತ್ರಸ್ತ ಕುಟುಂಬದವರಿಗೆ ಪುನರ್ವಸತಿ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಉಳುವರೆಯ 34 ಕುಟುಂಬಗಳನ್ನು ಸ್ಥಳಾಂತರ ಮಾಡಲು ಅಂಕೋಲಾ ತಾಲೂಕಿನ ದೇವಿಗದ್ದೆಯಲ್ಲಿ 38 ಗುಂಟೆ ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಉಳುವರೆ ಗ್ರಾಮದ ಎತ್ತರದ ಪ್ರದೇಶದಲ್ಲಿಯೇ ಸರ್ಕಾರಿ ಪಡಾ ಜಾಗವಿದ್ದು, ಮೊದಲು ಆ ಜಾಗವನ್ನು ಹಂಚಿಕೆ ಮಾಡಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಆ.22 ರಂದು ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮಸ್ಥರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವಿಗದ್ದೆ 38 ಗುಂಟೆ ಜಾಗದ ಮೇಲೆ ಖಾಸಗಿ ವ್ಯಕ್ತಿಯ ಭೋಜಾ ಕಾಣಿಸುತ್ತಿದೆ. ಅಲ್ಲದೇ ದೂರದಲ್ಲಿ ಜಾಗ ಕೊಟ್ಟರೆ ನಮ್ಮ ಜಮೀನು ನೋಡಲು ಸಾಕಷ್ಟು ದೂರ ಬರಬೇಕಾಗುತ್ತದೆ. ಮೀನುಗಾರರು ಮೀನುಗಾರಿಕೆಗೆ ನದಿಯ ಸಮೀಪ ಬರಲು ಸಮಸ್ಯೆಯಾಗುತ್ತದೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ.

ಅಲ್ಲದೇ, ಪರಿಹಾರವನ್ನೂ ಸೂಚಿಸಿರುವ ಗ್ರಾಮಸ್ಥರು ಉಳುವರೆ ಗ್ರಾಮದ ಅರ್ಧ ಕಿಮೀ ವ್ಯಾಪ್ತಿಯಲ್ಲೇ 38 ಗುಂಟೆ ಸರ್ಕಾರಿ ಪಡಾ ಇದೆ. ಮೊದಲು ಆ ಜಾಗವನ್ನು ಹಂಚಿಕೆ ಮಾಡಿ, ಉಳಿದವರಿಗೆ ದೇವಿಗದ್ದೆಯಲ್ಲಿ ನೀಡಿ. ಶೀಘ್ರದಲ್ಲಿ ಪಟ್ಟಾ ನೀಡುವ ಕಾರ್ಯವಾಗಲಿ ಎಂದು ಸಭೆಯಲ್ಲಿ ಒತ್ತಾಯ ಮಾಡಿದ್ದೇವೆ ಎಂದು ಉಳುವರೆ ಗ್ರಾಪಂ ಸದಸ್ಯ ಕೃಷ್ಣ ಗೌಡ ವಿಜಯವಾಣಿಗೆ ತಿಳಿಸಿದ್ದಾರೆ.