ತುಂಬಿ ಹರಿಯುತ್ತಿರುವ ಕುಮಾರಧಾರಾ ನದಿ 
ಜಿಲ್ಲೆ

ಉಕ್ಕೇರಿದ ನೇತ್ರಾವತಿ, ಕುಮಾರಧಾರಾ :ಉಪ್ಪಿನಂಗಡಿಯಲ್ಲಿ ನೆರೆ ಭೀತಿ ; ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಠಿಕಾಣಿ

ಇಂದಿರಾ ಎನ್ ಕೆ

ಉಪ್ಪಿನಂಗಡಿ: ಕಳೆದೆರಡು ದಿನಗಳಿಂದ ಉಪ್ಪಿನಂಗಡಿಯಲ್ಲಿ ನೆರೆ ಭೀತಿ ಮೂಡಿಸುತ್ತಾ ನೇತ್ರಾವತಿ-ಕುಮಾರಧಾರಾ ನದಿಗಳು ಮೈತುಂಬಿ ಹರಿಯುತ್ತಿದ್ದು, ನದಿಗಳ ನೀರಿನ ಮಟ್ಟ ಏರಿಳಿಕೆಹಾದಿಯಲ್ಲಿವೆ. ನದಿಗಳ ಹರಿಯುವಿಕೆ ಈವರೆಗೆ ಅಪಾಯಮಟ್ಟದಿಂದ ಕೆಳಗಿದ್ದು, ಗುರುವಾರ ಸಾಯಂಕಾಲದಿಂದ ನೀರಿನ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ.

ಈ ಮಧ್ಯೆ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇದು ನೇತ್ರಾವತಿಯನ್ನು ಸೇರಿದ ಬಳಿಕ ನದಿಯ ಮಟ್ಟ ಹೆಚ್ಚಳಗೊಳ್ಳುವ ಭೀತಿ ಮೂಡಿಸಿದೆ.

ಜು.18ರಂದು ಮುಂಜಾನೆ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡಿತ್ತಾದರೂ, ಬಳಿಕ ಅರ್ಧ ಮೀಟರ್‌ನಷ್ಟು ಇಳಿಕೆಯಾಗಿತ್ತು. ಸಾಯಂಕಾಲದಿಂದ ಮತ್ತೆ ನದಿಗಳ ನೀರಿನ ಮಟ್ಟ ಏರಿಕೆಯಾಗತೊಡಗಿದ್ದು, ರಾತ್ರಿಯಾಗುತ್ತಲೇ 36 ಮೆಟ್ಟಿಲುಗಳಲ್ಲಿ ಏಳು ಮೆಟ್ಟಿಲುಗಳಷ್ಟೇ ಕಾಣುತ್ತಿವೆ. ಕಳೆದ ಮೂರ‌್ನಾಲ್ಕು ದಿನಗಳಿಂದ ಕುಮಾರಧಾರ ನದಿಯಲ್ಲಿ ಹೆಚ್ಚಿನ ನೀರಿನ ಹರಿವು ಕಂಡು ಬಂದಿದೆ. ಗುರುವಾರ ಮತ್ತೆ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಸಂಗಮ ಕ್ಷೇತ್ರದಲ್ಲಿ ನೇತ್ರಾವತಿ ನದಿ ನೀರಿನ ಸರಾಗ ಹರಿಯುವಿಕೆಗೆ ತಡೆಯೊಡ್ಡಿದೆ. ಸಹಜವಾಗಿ ನದಿ ಪಾತ್ರದಲ್ಲಿನ ತಗ್ಗು ಪ್ರದೇಶಗಳ ಕೃಷಿ ಭೂಮಿ ಜಲಾವೃತಗೊಂಡಿದೆ.

ನೆರೆ ಪರಿಹಾರ ಕಾರ್ಯಾಚರಣೆಗೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ದೇವಾಲಯದ ಬಳಿಯೇ ಠಿಕಾಣಿ ಹೂಡಿದ್ದು, ದಿನದ 24 ಗಂಟೆ ಸನ್ನದ್ಧ ಸ್ಥಿತಿಯಲ್ಲಿದೆ. ಉಪ್ಪಿನಂಗಡಿ ಉಪತಹಸೀಲ್ದಾರ್ ಚೆನ್ನಪ್ಪ ಗೌಡರ ಸೂಚನೆಯಂತೆ ನೆರೆ ಪೀಡಿತ ಪ್ರದೇಶವಾದ ಮಠ, ಹಳೆಗೇಟು ಮತ್ತಿತರ ಕಡೆಗಳಿಗೆ ತೆರಳಿದ ಪ್ರವಾಹ ರಕ್ಷಣಾ ತಂಡ ನೆರೆ ಬಂದ ಸಂದರ್ಭ ಸಂಪರ್ಕಿಸುವಂತೆ ಅಲ್ಲಿನವರಿಗೆ ಮಾಹಿತಿ ನೀಡಿದೆ.

26ಕ್ಕೆ ಮಹಾನೆರೆಗೆ 50 ವರ್ಷ!

ಲಭ್ಯ ಮಾಹಿತಿಯ ಪ್ರಕಾರ 1923ರಲ್ಲಿ ಉಪ್ಪಿನಂಗಡಿಯಲ್ಲಿ ಅತೀ ದೊಡ್ಡ ಪ್ರವಾಹ ಬಂದಿದ್ದು, ಆ ಸಂದರ್ಭ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಬ್ರಹ್ಮರಥವೂ ನೆರೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆ ಬಳಿಕ ಅತೀ ದೊಡ್ಡ ಪ್ರವಾಹ 26-07-1974ರದ್ದಾಗಿದೆ. ಈ ಪ್ರವಾಹ ಬಂದು ಜುಲೈ 26ಕ್ಕೆ 50 ವರ್ಷವಾಗಲಿದೆ. ಅಂದಿನಂತೆ ಈ ಬಾರಿಯೂ 26ನೇ ತಾರೀಕು ಶುಕ್ರವಾರ ಬರುವುದು ವಿಶೇಷವಾಗಿದೆ. ಅದು ಬಿಟ್ಟರೆ ಆ ಬಳಿಕ 1997, 2008 ಹಾಗೂ 2009 ಹಾಗೂ 2013ರಲ್ಲಿ ನೆರೆ ಬಂದು ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಬಳಿ ಸಂಗಮವಾಗಿತ್ತು. ಆ ಬಳಿಕ ಸಂಗಮವಾಗಿದ್ದು 2018ರಲ್ಲಿ. ಆ ಬಾರಿ ಮಾತ್ರ ಆಗಸ್ಟ್ 14 ಮತ್ತು 16ರಂದು ಎರಡು ಬಾರಿ ಸಂಗಮವಾಗಿತ್ತು. ಲಭ್ಯ ಇತಿಹಾಸದ ಪ್ರಕಾರ ವರ್ಷದಲ್ಲಿ ಎರಡು ಬಾರಿ ಸಂಗಮವಾಗಿದ್ದು, ಇದೇ ಮೊದಲಾಗಿತ್ತು. ಬಳಿಕ 2019ರಲ್ಲಿಯೂ ಸಂಗಮವಾಗಿದ್ದು, ಆದಿನ ಆಗಸ್ಟ್ 9ರಂದು ಆದ ಸಂಗಮ 10ರಂದೂ ಮುಂದುವರಿದಿತ್ತು.

ಸಂಗಮವೆಂದರೇನು?

ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳು ಒಳಹರಿವಿನ ಮೂಲಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಬಳಿ ನಿತ್ಯ ಸಂಗಮವಾಗುತ್ತದೆ. ಆದರೆ ಮಳೆಗಾಲದಲ್ಲಿ ದೇವಾಲಯದ ಎಡ ಹಾಗೂ ಬಲ ಭಾಗದಿಂದ ಬಂದ ಉಭಯ ನದಿಯ ನೀರು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಅಂಗಣಕ್ಕೆ ಹೊಕ್ಕು ಅಲ್ಲಿನ ಧ್ವಜಸ್ತಂಭವನ್ನು ಸ್ಪರ್ಶಿಸಿದಾಗ ಪವಿತ್ರ ಸಂಗಮ ಘಟಿಸುತ್ತದೆ. ಆ ಸಂದರ್ಭ ಗಂಗಾಪೂಜೆ ನಡೆಸಿ, ಬಾಗೀನವನ್ನು ಗಂಗಾ ಮಾತೆಗೆ ಸಮರ್ಪಿಸಲಾಗುತ್ತದೆ. ಭಕ್ತರು ಸಂಗಮ ಸ್ನಾನ ಮಾಡುತ್ತಾರೆ.