ನಿಂಬಳಗೆರೆ ಗ್ರಾಮದ ರೈತ ಮಲ್ಲಿಕಾರ್ಜುನ ಮಳೆ ಇಲ್ಲದ ಒಣಗಿದ ಮೆಕ್ಕೆಜೋಳವನ್ನು ಕಿತ್ತು ದನಗಳಿಗೆ ಕಣದಲ್ಲಿ ಸಂಗ್ರಹಿಸಿರುವುದು. 
ಜಿಲ್ಲೆ

ದನಕರುಗಳಿಗೆ ಮೇವಾದ ಮಕ್ಕೆಜೋಳ

ನರೇಶ್ ಕುಮಾರ್

ಉಜ್ಜಿನಿ: ಮಳೆ ಕೈಕೊಟ್ಟ ಕಾರಣ ರೈತರು ಬಿತ್ತನೆ ಮಾಡಿದ ಬೆಳೆ ಒಣಗುತ್ತಿದ್ದು, ಸಂಕಷ್ಟಕ್ಕೆ ದೂಡಿದೆ. ಇನ್ನೊಂದೆಡೆ ಮೆಕ್ಕೆಜೋಳ ಬೆಳೆದವರು ಬೆಳೆ ಕಿತ್ತು ದನಕರುಗಳಿಗೆ ಆಹಾರವಾಗಿ ಬಳಸಲು ಮುಂದಾಗಿದ್ದಾರೆ.

ಮುಂಗಾರು ಹಂಗಾಮಿನ ಮಳೆ ನಂಬಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆಗಳು ಒಣಗಲಾರಂಭಿಸಿವೆ. ಉಜ್ಜಿನಿ, ತೂಲಹಳ್ಳಿ, ಬೆನಕಹಳ್ಳಿ, ಬೈರದೇವರಗುಡ್ಡ, ಕಾಳಾಪುರ, ನಾಗೇನಹಳ್ಳಿ, ಮಂಗಾಪುರ, ನಿಂಬಳಗೆರೆ ಗ್ರಾಮಗಳಲ್ಲಿ ಬಿತ್ತಿದ ಮೆಕ್ಕಜೋಳ ಸಂಪೂರ್ಣ ಒಣಗಲಾರಂಭಿಸಿದೆ.

ಇದರಿಂದ ಚಿಂತೆಗೀಡಾದ ರೈತರು ಹೊಲದಲ್ಲಿ ಉಳಿದಿರುವ ಅಲ್ಪ ಸ್ವಲ್ಪ ಫಸಲನ್ನು ಕಿತ್ತು ದನ ಕರುಗಳಿಗೆ ಮೇವಾಗಿ ಸಂಗ್ರಹ ಮಾಡುತ್ತಿದ್ದಾರೆ. ನಿಂಬಳಗೆರೆ ಗ್ರಾಮದ ಮಲ್ಲಿಕಾರ್ಜುನ 7 ಎಕರೆ ಮೆಕ್ಕೆಜೋಳವನ್ನು ಗುರುವಾರ ಕಿತ್ತು ಕಣದಲ್ಲಿ ಸಂಗ್ರಹ ಮಾಡಿದ್ದಾರೆ. ಹೊಲದಲ್ಲಿ ಬಿಟ್ಟರೆ ಒಣಗುತ್ತದೆ. ಅದ್ದರಿಂದ ಕಿತ್ತು ಸಂಗ್ರಹಿಸಲಾಗುತ್ತಿದೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ.

ಕೊಳವೆಬಾವಿ ಇದ್ದವರು ನೀರು ಹರಿಸಿ ಬೆಳೆ ರಕ್ಷಣೆ ಮಾಡಿಕೊಳ್ಳಬೇಕೆಂದರೆ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಮತ್ತಷ್ಟು ಚಿಂತೆಗೀಡು ಮಾಡಿದೆ. ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೂಲಿ ಸೇರಿದಂತೆ 15 ರಿಂದ 20 ಸಾವಿರ ರೂ. ವೆಚ್ಚ ಮಾಡಲಾಗಿದೆ.

ಈಗ ಮಳೆ ಕೈಕೊಟ್ಟು ಬೆಳೆದ ಬೆಳೆಗಳು ಕೈಗ ಸಿಗದಂತಾಗಿದೆ. ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆ ಕಾಡುತ್ತಿದೆ. ಅದ್ದರಿಂದ ಸರ್ಕಾರ ತಾಲೂಕನ್ನು ಬರ ಪೀಡಿತವೆಂದು ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.