ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋ ಪ್ರಯುಕ್ತ ಮುನ್ನೆಚ್ಚರಿಕೆಯ ಕ್ರಮವಾಗಿ ಫೆಬ್ರವರಿ 8 ರವರೆಗೆ ನಗರದಲ್ಲಿ ಯಾವುದೇ ಅನ್ಮ್ಯಾನ್ಡ್ ಏರಿಯಲ್ ವೆಹಿಕಲ್(ಯುಎವಿ)ಗಳನ್ನು, ಡ್ರೋನ್ ಅಥವಾ ಬಲೂನುಗಳನ್ನು ಹಾರಿಸುವಂತಿಲ್ಲ ಎಂದು ಬೆಂಗಳೂರು ಜಿಲ್ಲಾ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಯಲಹಂಕದಲ್ಲಿ ಫೆಬ್ರವರಿ 3 ರಿಂದ 5 ರವರೆಗೆ ಏರೋ ಇಂಡಿಯಾ ಶೋ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಳು ಆಗಲೇ ಆರಂಭಗೊಂಡಿದ್ದು, ಭಾರೀ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಫೆಬ್ರವರಿ 1 ರಿಂದ 8 ರವರೆಗೆ ಸಬ್-ಕನ್ವೆಂಷನಲ್ ಆದ ಯಾವುದೇ ಚಾಲಕರಿಲ್ಲದ ಏರಿಯಲ್ ವೆಹಿಕಲ್(ಯುಎವಿ)ಗಳನ್ನು ಹಾರಿಸುವುದರ ಮೇಲೆ ನಿಷೇಧ ಹೇರಲಾಗಿದೆ. ರೋಬೋಟಿಕ್ ಡಿವೈಸ್ಗಳು, ಪ್ಯಾರಾ-ಗ್ಲೈಡರ್, ಸಣ್ಣ ಏರ್ಕ್ರಾಫ್ಟ್, ಮೈಕ್ರೋ-ಲೈಟ್ಸ್, ಡ್ರೋನ್ ಅಥವಾ ಕ್ವಾಡ್ಕ್ಯಾಪ್ಟರ್ ಮತ್ತು ಬಲೂನುಗಳನ್ನೂ ಹಾರಿಬಿಡುವ ಹಾಗಿಲ್ಲ ಎಂದು ಆಯುಕ್ತರಾದ ಕಮಲ್ ಪಂತ್ ತಿಳಿಸಿದ್ದಾರೆ.
ಕೋವಿಡ್ ಪ್ರೋಟೊಕಾಲ್ಅನ್ನು ಅನುಸರಿಸಿ ಮಾಡುತ್ತಿರುವ ಈ ಪ್ರದರ್ಶನದ ವೇಳೆ ರಾಜ್ಯ ಸರ್ಕಾರದ ಕೋವಿಡ್ ಪರೀಕ್ಷೆ ಮತ್ತು ಕ್ವಾರಂಟೇನ್ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ಪಂತ್ ಹೇಳಿದ್ದಾರೆ. ಏರೋ ಇಂಡಿಯಾ 2021 ಶೋನಲ್ಲಿ 14 ದೇಶಗಳಿಂದ 78 ವಿದೇಶೀ ಪ್ರದರ್ಶಕರು ಮಾತ್ರ ಭಾಗವಹಿಸುತ್ತಿದ್ದಾರೆ. ಕರೊನಾ ಪೂರ್ವ 2019 ರ ಏರೋ ಇಂಡಿಯಾ 200 ವಿದೇಶಿ ವಾಣಿಜ್ಯ ಕಂಪೆನಿಗಳು ಭಾಗವಹಿಸಿದ್ದವು. 464 ಭಾರತೀಯ ಪ್ರದರ್ಶಕರು ನೋಂದಣಿ ಮಾಡಿಕೊಂಡಿದ್ದು, 105 ಪ್ರದರ್ಶಕರು ವರ್ಚುಯಲ್ ಆಗಿ ಭಾಗವಹಿಸಲಿದ್ದಾರೆ. ವರ್ಚುಯಲ್ ಎಕ್ಸಿಬಿಷನ್ನಲ್ಲಿ 24 ಗಂಟೆಗಳೂ ಭಾಗವಹಿಸುವ ಅವಕಾಶವಿದೆಯಾದರೂ, ಕರೊನಾ ಹಿನ್ನೆಲೆಯಲ್ಲಿ ಏರ್ ಡಿಸ್ಪ್ಲೇ ವಿಶುಯಲ್ ಏರಿಯಾಗೆ ಕೇವಲ 15,000 ಜನರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ ಎನ್ನಲಾಗಿದೆ.(ಏಜೆನ್ಸೀಸ್)