ಜಿಲ್ಲೆ

ಗ್ಯಾಸ್ ಸಿಲಿಂಡರ್​​ನ ಭೀಕರ ಸ್ಫೋಟಕ್ಕೆ ಇಬ್ಬರು ಬಲಿ; ಕಾಪಾಡಿ ಕಾಪಾಡಿ ಅಂತ ಕೂಗಾಡಿ ಬೆಂಕಿಗಾಹುತಿಯಾದ ಮಹಿಳೆ

ಬೆಂಗಳೂರು: ರಾಜಧಾನಿಯ ಅಪಾರ್ಟ್​ಮೆಂಟ್​​ವೊಂದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿನ ಆಶ್ರಿತ್ ಆ್ಯಸ್ಪೈರ್ ಎಂಬ ಅಪಾರ್ಟ್​ಮೆಂಟ್​​ನಲ್ಲಿ ಈ ಅವಘಡ ಸಂಭವಿಸಿದ್ದು, ಒಂದು ಫ್ಲ್ಯಾಟ್​ನಲ್ಲಿ ಸಂಭವಿಸಿದ ಸ್ಫೋಟದಿಂದ ಅಕ್ಕಪಕ್ಕದ ಇತರ ಫ್ಲ್ಯಾಟ್​ಗಳೂ ಧಗಧಗನೆ ಹೊತ್ತಿ ಉರಿಯುತ್ತಿವೆ.

ಈ ಅಗ್ನಿ ಆಕಸ್ಮಿಕದಲ್ಲಿ ಲಕ್ಷ್ಮೀದೇವಿ (82) ಹಾಗೂ ಭಾಗ್ಯರೇಖಾ ಎಂಬಿಬ್ಬರು ಬೆಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಮಹಿಳೆಯೊಬ್ಬರು ಫ್ಲ್ಯಾಟ್​ನ ಯುಟಿಲಿಟಿಯಲ್ಲಿ ಬೆಂಕಿಯ ಕೆನ್ನಾಲಿಗೆ ನಡುವೆ ಸಿಲುಕಿಕೊಂಡಿದ್ದು, ಕಾಪಾಡಿ ಕಾಪಾಡಿ ಎಂದು ಕೂಗಾಡುತ್ತಲೇ ಬೆಂಕಿಗಾಹುತಿಯಾಗಿದ್ದಾರೆ. ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಹೊರಗೆ ದೂರದಲ್ಲಿದ್ದ ಜನರು ಅಸಹಾಯಕರಾಗಿ ಮರುಗುವಂತಾಗಿತ್ತು.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬೆಂಕಿ ಇನ್ನೂ ಸಂಪೂರ್ಣ ತಹಬದಿಗೆ ಬರದ್ದರಿಂದ ಅವಘಡದ ಸಾವು-ನೋವಿನ ಕುರಿತ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಅವರೊಂದಿಗೆ ಪೊಲೀಸರು ಹಾಗೂ ಸಾರ್ವಜನಿಕರು ಕೈಜೋಡಿಸಿದ್ದಾರೆ. ಅಕ್ಕಪಕ್ಕದ ಕೆಲವು ಫ್ಲ್ಯಾಟ್​ಗಳ ಜನರನ್ನು ತೆರವುಗೊಳಿಸಲಾಗಿದೆ.