ಜಿಲ್ಲೆ

ಸೀಟಿಗಾಗಿ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಮಹಿಳೆಯರು; Video Viral

ಬೆಳಗಾವಿ: 2023ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್​ ಪಕ್ಷ (Congress Party) ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ (Shakti Scheme) ರಾಜ್ಯದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಬಸ್​ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ. ಯೋಜನೆ ಜಾರಿಯಾಗಿ ಒಂದು ವರ್ಷಕ್ಕೂ ಅಧಿಕ ಕಾಲಗಳಾಗಿದ್ದು, ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಆದರೆ, ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳೆಯರ ನಡುವೆ ಬಸ್ಸಿನಲ್ಲಿ ಸೀಟಿಗಾಗಿ ಹೊಡೆದಾಟ ಹೆಚ್ಚಾಗಿದ್ದು, ಇದೀಗ ಈ ಘಟನೆ ಮರುಕಳಿಸಿದೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಈ ಘಟನೆ ನಡೆದಿದ್ದು, ಸೀಟಿಗಾಗಿ ಮಹಿಳೆಯರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ (Video Viral) ಆಗಿದೆ.

ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ಪಡೆಯಲು ಸವದತ್ತಿಗೆ ಹೋಗುವ ಬಸ್ಸನ್ನು ಮಹಿಳೆಯರು ಹತ್ತಿದ್ದಾರೆ. ಈ ವೇಳೆ ಸೀಟ್​ಗಾಗಿ ಇಬ್ಬರು ಮಹಿಳೆಯರ ನಡುವೆ ಜಗಳ ಆರಂಭವಾಗಿದೆ. ಇಬ್ಬರು ಮಹಿಳೆಯರ ನಡುವೆ ಸೀಟಿನ ವಿಚಾರವಾಗಿ ಗಲಾಟೆ ತಾರಕಕ್ಕೇರಿ ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಅಡ್ಡ ಬಂದ ಬಾಲಕಿಗೆ ಚಪ್ಪಲಿಯಲ್ಲಿ ಮಹಿಳೆಯರು ಹೊಡೆದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಮಹಿಳೆಯರ ನಡೆಗೆ ಕಿಡಿಕಾರಿದ್ದಾರೆ. ಕೂಡಲೇ ಯೋಜನೆಯನ್ನು ನಿಲ್ಲಿಸಿ ಮತ್ತು ಈ ರೀತಿ ಮಾಡಿದ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.