ಜಿಲ್ಲೆ

ಗೋಕರ್ಣದಲ್ಲಿ ಸಮುದ್ರ ಪಾಲಾದ ಇಬ್ಬರು ಪ್ರವಾಸಿಗರು

Uttara Kannada - Subash Hegde

ಗೋಕರ್ಣ:ಇಲ್ಲಿನ ಮೇನ್ ಬೀಚ್‌ನ ಬೆಲೇಹಿತ್ತಲ ಸಮುದ್ರದಲ್ಲಿ ಈಜಾಡಲು ಇಳಿದಿದ್ದ ಇಬ್ಬರು ಯುವಕರು ಸಾವಿಗೀಡಾಗಿದ್ದು ಓರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ಮಧ್ಯಾನ್ಹ ನಡೆದಿದೆ.

ಕಲಬುರ್ಗಿ ಮಹದೇವ ನಗರದ ಅಭಿಷೇಕ ಭೀಮಳ್ಳಿ(21) ಮತ್ತು ಆಕಾಶ ಬಿರಾದರ(24) ಮೃತರು.ಹತ್ತಿರದ ರೆಸಾರ್ಟ್ನಲ್ಲಿ ತಂಗಿದ್ದ ಐದು ಜನ ಯುವಕರ ಪೈಕಿ ಮೂವರು ಮಧ್ಯಾನ್ಹ 3 ಗಂಟೆ ಸಮಯದಲ್ಲಿ ಈಜಲು ನೀರಿಗಿಳಿದಾಗ ಅಲೆಯ ರಭಸಕ್ಕೆ ಇಬ್ಬರು ನಾಪತ್ತೆಯಾಗಿದ್ದರು.

ಸಂಕಷ್ಟಕ್ಕೆ ಸಿಲುಕಿದ್ದ ಇನ್ನೋರ್ವನನ್ನು ನೋಡಿದ ತೀರದಲ್ಲಿದ್ದ ಸ್ಥಳೀಯರು ಆತನನ್ನು ಮೇಲಕ್ಕೆ ತಂದು ಉಳಿಸಿದರು.ಸಂಜೆ ಐದು ಗಂಟೆ ಸುಮಾರಿಗೆ ಒಂದೊಂದಾಗಿ ಶವ ಅದೇ ತೀರದಲ್ಲಿ ಪತ್ತೆಯಾಗಿದೆ.ಪೊಲೀಸ್ ಇನಸ್ಪೆಕ್ಟರ್ ವಸಂತ ಆಚಾರ್ಯ,ಪಿಎಸ್‌ಐ ರವೀಂದ್ರ ಬಿರಾದರ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ನಿರ್ವಹಿಸಿದರು.ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯ ತೀರದಲ್ಲಿ ಕರ್ತವ್ಯದಲ್ಲಿರುವ ಜೀವ ರಕ್ಷಕ ಸಿಬ್ಬಂದಿ ಕಣ್ಣು ತಪ್ಪಿಸಿ ಅಲ್ಲಿಂದ ದೂರವಿರುವ ಈ ಭಾಗಗಳಿಗೆ ಬಂದು ಪ್ರವಾಸಿಗರು ನೀರಿಗಿಳಿದು ಜೀವಕ್ಕೆ ಎರವಾಗುವ ಘಟನೆ ಆಗಾಗ ಸಂಭವಿಸುತ್ತಿದೆ.